ಮಧ್ಯಪ್ರದೇಶ: 12-14 ಪ್ರಾಯ ಗುಂಪಿನ ಮಕ್ಕಳಿಗೆ ಕೋವಿಡ್ ಲಸಿಕೆ ನೀಡಿಕೆ ಆರಂಭ
ಭೋಪಾಲ, ಮಾ. 23: ಕೋವಿಡ್ ಸಾಂಕ್ರಾಮಿಕ ರೋಗದ ವಿರುದ್ಧ ಮಧ್ಯಪ್ರದೇಶದಲ್ಲಿ 12ರಿಂದ 14ರ ವರೆಗಿನ ಪ್ರಾಯ ಗುಂಪಿನ ಮಕ್ಕಳಿಗೆ ಬುಧವಾರದಿಂದ ಕೋವಿಡ್ ಲಸಿಕೆ ನೀಡಿಕೆ ಆರಂಭವಾಗಿದೆ. ಮುಂದೆ ಬಂದು ಕೋವಿಡ್ ಸೋಂಕಿನ ವಿರುದ್ಧ ಲಸಿಕೆ ಹಾಕಿಸಿಕೊಳ್ಳುವಂತೆ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಜನರಲ್ಲಿ ಮನವಿ ಮಾಡಿದ್ದಾರೆ.
ರಾಜ್ಯದ ರಾಜಧಾನಿ ಭೋಪಾಲದ ಅರೇರಾ ಕಾಲನಿಯಲ್ಲಿರುವ ಸರಕಾರಿ ಶಾಲೆಯಲ್ಲಿ ಕೋವಿಡ್ ಲಸಿಕೆ ನೀಡಿಕೆ ಅಭಿಯಾನವನ್ನು ಶಿವರಾಜ್ ಸಿಂಗ್ ಚೌಹಾಣ್ ಅವರು ಉದ್ಘಾಟಿಸಿದರು. ಅಲ್ಲಿ ಅರ್ಹ ಪ್ರಾಯ ಗುಂಪಿನ ಬಾಲಕಿಯೋರ್ವಳಿಗೆ ಮೊದಲ ಕೋವಿಡ್ ಲಸಿಕೆ ನೀಡಲಾಯಿತು. ‘‘ದೇಶದಲ್ಲಿ ಇದುವರೆಗೆ ಕೋವಿಡ್ ಲಸಿಕೆಯ 181 ಕೋಟಿ ಡೋಸ್ಗಳನ್ನು ನೀಡಲಾಗಿದೆ. ಕೋವಿಡ್ನ ಮೂರನೇ ಅಲೆ ಯಾವುದೇ ರೀತಿಯ ಪರಿಣಾಮ ಉಂಟು ಮಾಡಲಾರದು. ಯಾಕೆಂದರೆ ಹೆಚ್ಚಿನ ಜನರು ಕೋವಿಡ್ ಲಸಿಕೆ ತೆಗೆದುಕೊಂಡಿದ್ದಾರೆ. ಮಧ್ಯಪ್ರದೇಶದಲ್ಲಿ ಇದುವರೆಗೆ 11.44 ಕೋಟಿ ಡೋಸ್ಗಳನ್ನು ನೀಡಲಾಗಿದೆ’’ ಎಂದು ಚೌಹಾಣ್ ಹೇಳಿದರು.
ಕಾರ್ಯಕ್ರಮದಲ್ಲಿ ಮಧ್ಯಪ್ರದೇಶದ ವೈದ್ಯಕೀಯ ಶಿಕ್ಷಣ ಸಚಿವ ವಿಶ್ವಾಸ್ ಸಾರಂಗ್ ಹಾಗೂ ಇತರ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು. ಈ ನಡುವೆ ಮಧ್ಯಪ್ರದೇಶದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಆರೋಗ್ಯ) ಮುಹಮ್ಮದ್ ಸುಲೈಮಾನ್, ಸರಕಾರಿ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ಶಾಲೆಗಳಲ್ಲಿ ಮಾತ್ರ ಲಸಿಕಾ ಕಾರ್ಯಕ್ರಮವನ್ನು ಆಯೋಜಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು. 12ರಿಂದ 14ರ ವರೆಗಿನ ಪ್ರಾಯ ಗುಂಪಿನ ಮಕ್ಕಳಿಗೆ ರಾಷ್ಟ್ರೀಯ ಲಸಿಕಾ ಅಭಿಯಾನವನ್ನು ಮಾರ್ಚ್ 16ರಂದು ಆರಂಭಿಸಲಾಗಿದೆ. ಆದರೆ, ಮುಂಚೂಣಿ ಕಾರ್ಯಕರ್ತರಿಗೆ ಅಗತ್ಯದ ತರಬೇತಿ ನೀಡಿದ ಬಳಿಕ ಮಾರ್ಚ್ 22ರಿಂದ ಲಸಿಕಾ ಅಭಿಯಾನ ಆರಂಭಿಸಲಾಗುವುದು ಎಂದು ಮಧ್ಯಪ್ರದೇಶದ ಆರೋಗ್ಯಾಧಿಕಾರಿ ಆಗ ಹೇಳಿದ್ದರು.







