ರಾಜಸ್ಥಾನದಲ್ಲಿ ದಲಿತರು, ಆದಿವಾಸಿಗಳಿಗೆ ರಕ್ಷಣೆ ಇಲ್ಲ: ರಾಷ್ಟ್ರಪತಿ ಆಳ್ವಿಕೆ ಹೇರಲು ಮಾಯಾವತಿ ಆಗ್ರಹ

ಲಕ್ನೋ, ಮಾ. 23: ರಾಜಸ್ಥಾನದಲ್ಲಿರುವ ಕಾಂಗ್ರೆಸ್ ನೇತೃತ್ವದ ಸರಕಾರ ದಲಿತರು ಹಾಗೂ ಆದಿವಾಸಿಗಳನ್ನು ರಕ್ಷಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಬುಧವಾರ ಆರೋಪಿಸಿರುವ ಬಿಎಸ್ಪಿ ವರಿಷ್ಠೆ ಮಾಯಾವತಿ, ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವಂತೆ ಆಗ್ರಹಿಸಿದ್ದಾರೆ. ತನ್ನ ಹೇಳಿಕೆಗೆ ಪುರಾವೆಯಾಗಿ ರಾಜಸ್ಥಾನದಲ್ಲಿ ದಲಿತರು ಹಾಗೂ ಆದಿವಾಸಿಗಳ ಮೇಲೆ ನಡೆದ ಹಲವು ದೌರ್ಜನ್ಯದ ಪ್ರಕರಣಗಳನ್ನು ಮಾಯಾವತಿ ಅವರು ಉಲ್ಲೇಖಿಸಿದ್ದಾರೆ.
‘‘ರಾಜಸ್ಥಾನದ ಕಾಂಗ್ರೆಸ್ ಸರಕಾರದ ಅಡಿಯಲ್ಲಿ ದಲಿತರು ಹಾಗೂ ಆದಿವಾಸಿಗಳ ಮೇಲಿನ ದೌರ್ಜನ್ಯ ಘಟನೆಗಳಲ್ಲಿ ತೀವ್ರವಾಗಿ ಏರಿಕೆಯಾಗಿದೆ. ಇತ್ತೀಚೆಗೆ ದಿಡ್ವಾನ ಹಾಗೂ ಧೋಲ್ಪುರದಲ್ಲಿ ದಲಿತ ಬಾಲಕಿಯರ ಮೇಲೆ ಅತ್ಯಾಚಾರ ನಡೆದಿದೆ. ಆಲ್ವಾರ್, ಪಾಲಿ, ಜೋಧಪುರದಲ್ಲಿ ದಲಿತ ಯುವಕರ ಹತ್ಯೆ ನಡೆದಿದೆ. ಈ ಘಟನೆಗಳು ದಲಿತ ಸಮಾಜವನ್ನು ನಡುಗಿಸಿದೆ’’ ಎಂದು ಮಾಯಾವತಿ ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ರಾಜಸ್ಥಾನದಲ್ಲಿ ಕಾಂಗ್ರೆಸ್ ಸರಕಾರ ಸಂಪೂರ್ಣವಾಗಿ ವಿಫಲವಾಗಿದೆ. ಮುಖ್ಯವಾಗಿ ದಲಿತರು ಹಾಗೂ ಆದಿವಾಸಿಗಳನ್ನು ರಕ್ಷಿಸುವಲ್ಲಿ ಅದು ವಿಫಲವಾಗಿರುವುದು ಸ್ಪಷ್ಟ ಎಂದು ಅವರು ಹೇಳಿದ್ದಾರೆ. ‘‘ಆದುದರಿಂದ ಈ ಸರಕಾರವನ್ನು ವಜಾಗೊಳಿಸುವುದು ಹಾಗೂ ಅಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವುದು ಸೂಕ್ತ. ಇದು ಬಿಎಸ್ಪಿಯ ಆಗ್ರಹ’’ ಎಂದು ಮಾಯಾವತಿ ಹೇಳಿದ್ದಾರೆ.





