ಸರಕಾರದ ಆದೇಶ ಉಲ್ಲಂಘಿಸಿ ಪ್ರತಿಭಟನೆ: ವಾಟಾಳ್ ನಾಗರಾಜ್ ವಿರುದ್ಧ ಪ್ರಕರಣ ದಾಖಲು

ಬೆಂಗಳೂರು, ಮಾ.23: ಬೆಂಗಳೂರಿನಲ್ಲಿ ದೈನಂದಿನ ಚಟುವಟಿಕೆಗಳಿಗೆ ಯಾವುದೇ ಅಡಚಣೆಯಾಗದಂತೆ ಪ್ರತಿಭಟನೆಗೆ ಸ್ಥಳ ನಿಗದಿಪಡಿಸಿ ಸರಕಾರದ ಆದೇಶ ಹೊರಡಿಸಿದ್ದರೂ ಸಹ ಬೇರೆಡೆ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ವಿರುದ್ಧ ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರತಿಭಟನೆ ನಡೆಸುವ ಕುರಿತು ಈ ಹಿಂದೆಯೇ ಹೈಕೋರ್ಟ್ ನಿರ್ದೇಶನವನ್ನೂ ನೀಡಿತ್ತು.
ಕರ್ನಾಟಕ ಹೈಕೋರ್ಟ್‍ನ ನಿರ್ದೇಶನದಂತೆ ನಗರದಲ್ಲಿ ಪ್ರತಿಭಟನೆಗೆ ಫ್ರೀಡಂ ಪಾರ್ಕ್‍ನಲ್ಲಿ ಸ್ಥಳ ನಿಗದಿಪಡಿಸಿ ರಾಜ್ಯ ಸರಕಾರ ಆದೇಶಿಸಿದೆ.
ಆದರೆ, ರಾಜ್ಯದಲ್ಲಿ ಎಂಇಎಸ್ ಸಂಘಟನೆ ನಿಷೇಧಿಸುವಂತೆ ಒತ್ತಾಯಿಸಿ ಮಾ. 18ರಂದು ಮೈಸೂರು ಬ್ಯಾಂಕ್ ಸರ್ಕಲ್‍ನಲ್ಲಿ ವಾಟಾಳ್ ನಾಗರಾಜ್ ಏಕಾಂಗಿ ಪ್ರತಿಭಟನೆ ನಡೆಸಿದ್ದರು. ಹೀಗಾಗಿ, ನಿಗದಿತ ಸ್ಥಳ ಹೊರತುಪಡಿಸಿ ಬೇರೆಡೆ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ವಾಟಾಳ್ ನಾಗರಾಜ್ ವಿರುದ್ಧ ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





