ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಮಾ.28ರಿಂದ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಉಪವಾಸ

ಬೆಂಗಳೂರು, ಮಾ.23: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ಕೊಟ್ಟಿದ್ದ ಸರಕಾರ ಅದನ್ನು ಮರೆತಿದ್ದು, ಇದರ ವಿರುದ್ಧ ಮಾ.28ರಂದು ಅನಿರ್ದಿಷ್ಟಾವದಿ ಉಪವಾಸ ಸತ್ಯಾಗ್ರಹವನ್ನು ಬಳ್ಳಾರಿಯಲ್ಲಿ ಸಾರಿಗೆ ಸಚಿವರ ಮನೆ ಬಳಿ ಮಾಡಲಿದ್ದೇವೆ ಎಂದು ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ರಾಜ್ಯಾಧ್ಯಕ್ಷ ಚಂದ್ರಶೇಖರ್ ತಿಳಿಸಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, 2020ರಲ್ಲಿ ನಡೆದ ಸಾರಿಗೆ ಮುಷ್ಕರದ ಸಮಯದಲ್ಲಿ ಸರಕಾರ ನೀಡಿದ 9 ಲಿಖಿತ ಭರವಸೆಗಳ ಪೈಕಿ ಅದರಲ್ಲೂ ಮುಖ್ಯವಾಗಿ ಸರಕಾರಿ ನೌಕರರಿಗೆ ಚಾಲ್ತಿಯಲ್ಲಿರುವ ಆರನೆ ವೇತನ ಆಯೋಗದ ಮಾದರಿಯಲ್ಲಿ ಸಾರಿಗೆ ನೌಕರರಿಗೂ ವೇತನ ನಿಗದಿ ಮಾಡುವುದಾಗಿ ಮೂರು ತಿಂಗಳ ಕಾಲಾವಕಾಶ ಪಡೆಯಲಾಗಿತ್ತು.
ಸರಕಾರ ಕೊಟ್ಟ ಅವಧಿಯಲ್ಲಿ ಬೇಡಿಕೆಗಳನ್ನು ಈಡೇರಿಸಲಿಲ್ಲ. ಇದರಿಂದಾಗಿ ಮತ್ತೆ ಸಾರಿಗೆ ಮುಷ್ಕರ ಮಾಡಿದ್ದು, ಇದನ್ನೇ ನೆಪವಾಗಿಸಿಕೊಂಡ ಸರಕಾರ ನಿಗಮಗಳಲ್ಲಿ ಸಾವಿರಾರು ನೌಕರರನ್ನು ವಜಾ ಮಾಡಿ, ಅನೇಕರನ್ನು ವರ್ಗಾವಣೆ ಮಾಡಲಾಯಿತು ಹಾಗೂ ಅಮಾನತಿನಂತಹ ಕ್ರೂರ ಶಿಕ್ಷೆಯನ್ನು ನೌಕರರಿಗೆ ಕೊಡಲಾಯಿತು. ಸುಳ್ಳು ಪ್ರಕರಣಗಳನ್ನು ದಾಖಲಿಸಿ ನೂರಾರು ಕುಟುಂಬಗಳಿಗೆ ತೊಂದರೆ ಕೊಡಲಾಯಿತು. ಇದರ ಕುರಿತು ಸಾರಿಗೆ ಸಚಿವರಿಗೆ ಅನೇಕ ಬಾರಿ ಗಮನಕ್ಕೆ ತಂದರೂ ಪ್ರಯೋಜನವಾಗಲಿಲ್ಲ. ಮಾಧ್ಯಮಗಳಲ್ಲಿ ಮಾತ್ರ ಎಲ್ಲ ಸಮಸ್ಯೆಗಳನ್ನು ಈಡೇರಿಸಿದ್ದೇವೆ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ ಎಂದು ದೂರಿದರು.
ಸದ್ಯ ಅಮಾನತುಗೊಂಡಿರುವ ನೌಕರರನ್ನು ಮತ್ತೆ ಸೇವೆಗೆ ಸೇರಿಸಿಕೊಂಡು, ನಮಗೆ ಬರಬೇಕಾದ ಸಂಬಳವನ್ನು ಸರಿಯಾದ ಸಮಯದಲ್ಲಿ ನೀಡಿ, ಸಾರಿಗೆ ನೌಕರರ ಮೇಲೆ ಇರುವ ಪೊಲೀಸ್ ಪ್ರಕರಣಗಳನ್ನು ತ್ವರಿತವಾಗಿ ತೆಗೆದು, ಆರನೆ ವೇತನ ಆಯೋಗಕ್ಕೆ ನಮ್ಮನ್ನು ಪರಿಗಣಿಸಬೇಕು ಎಂದು ಸರಕಾರವನ್ನು ಆಗ್ರಹಿಸಿದರು.
ಮಾ.27ರ ಒಳಗೆ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ 28 ರಂದು ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳುತ್ತೇವೆ ಎಂದು ಸರಕಾರವನ್ನು ಎಚ್ಚರಿಸಿದರು. ಪತ್ರಿಕಾಗೋಷ್ಠಿಯಲ್ಲಿ ರಘು, ಅನಿಲ, ಶ್ರೀಧರ್, ಸಂತೋಷ್ ಉಪಸ್ಥಿತರಿದ್ದರು.







