ಸಮಾನತೆಗಿಂತ ಹೊಂದಾಣಿಕೆ ಮುಖ್ಯ
ಮಾನ್ಯರೇ,
ಉಡುಪಿ ಸರಕಾರಿ ಶಾಲೆಯಲ್ಲಿ ಆರಂಭವಾದ ಹಿಜಾಬ್ ವಿವಾದದ ಬಗ್ಗೆ ಹೈಕೋರ್ಟು ತೀರ್ಪು ರಾಜ್ಯಾದ್ಯಂತ ಮುಸ್ಲಿಮ್ ವಿದ್ಯಾರ್ಥಿನಿಯರ ಪರೀಕ್ಷೆಗೆ ತೊಡಕಾಗಿ ಪರಿಣಮಿಸಿರುವುದು ಬೇಸರದ ಸಂಗತಿ. ಸರಕಾರ ಮನಸ್ಸು ಮಾಡಿದರೆ ಕೋರ್ಟು ತೀರ್ಪನ್ನು ಗೌರವಿಸುತ್ತಲೇ ರಾಜ್ಯಾದ್ಯಂತ ಇದುವರೆಗೆ ಶಿರವಸ್ತ್ರಕ್ಕೆ ಅನುಮತಿಯಿರುವ ಶಾಲಾ ಅಭಿವೃದ್ಧಿಮಂಡಳಿಗಳೊಂದಿಗೆ ಸಮಾಲೋಚಿಸಿ ಹಿಂದಿನಂತೆಯೇ ಮುಂದುವರಿಯುವಂತೆ ಆದೇಶಿಸುವುದು ಕೋರ್ಟು ತೀರ್ಪಿಗೆ ವಿರುದ್ಧವಾಗುವುದೇ? ಕೇವಲ ಶಿರವಸ್ತ್ರದ ಕಾರಣಕ್ಕಾಗಿ ಹಿಂದೆ ಶಿಕ್ಷಣದಿಂದ ಮುಸ್ಲಿಮ್ ಹುಡುಗಿಯರು ವಂಚಿತರಾಗಿದ್ದರೆಂಬುದು ಸರಕಾರಕ್ಕೆ ಗೊತ್ತೇ ಇದೆ. ಕೋರ್ಟು ತೀರ್ಪು ಬಂದ ಬಳಿಕವೂ ಮಕ್ಕಳು ಪರೀಕ್ಷೆ ಬರೆಯದೆ ವಾಪಾಸಾಗುತ್ತಿದ್ದಾರೆ ಎಂದರೆ ಇದರಲ್ಲಿ ಯಾರ ಒತ್ತಡವೂ ಇಲ್ಲ ಎಂಬುದು ಸ್ಪಷ್ಟ.
ಆದ್ದರಿಂದ ಮಾನ್ಯ ಮುಖ್ಯಮಂತ್ರಿಯವರಲ್ಲಿ ವಿನಂತಿಯೇನೆಂದರೆ ಪರೀಕ್ಷೆ ಬರೆಯಲಾಗದೆ ಮಾನಸಿಕವಾಗಿ ನೊಂದಿರುವ ಹೆಣ್ಣುಮಕ್ಕಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಅನುವು ಮಾಡಿಕೊಡಿ. ಅಥವಾ ಸಮವಸ್ತ್ರದ ಬಟ್ಟೆಯನ್ನು ತಲೆಗೆಹಾಕುವಂತೆ ಹೇಳಲು ಸಿ.ಡಿ.ಸಿ.ಗೆ ಸೂಚಿಸಬಹುದಲ್ಲವೇ? ವಿವಾದವನ್ನು ಸುಲಭದಲ್ಲಿ ಬಗೆಹರಿಸಿ. ಸಮಾನತೆಗಿಂತ ಹೊಂದಾಣಿಕೆ ಮುಖ್ಯ. ಹೊಂದಾಣಿಕೆ ಇರುವಲ್ಲಿ ಸಂಘರ್ಷ,ದೌರ್ಜನ್ಯಕ್ಕೆ ಅವಕಾಶವೇ ಇರುವುದಿಲ್ಲ.





