ಕೇಳಿದ್ದು ಸಾವಿರ ಕೋಟಿ ರೂ., ಬಜೆಟ್‍ನಲ್ಲಿ ಕೊಟ್ಟಿದ್ದು ನೂರು ಕೋಟಿ ರೂ.: ಸಚಿವ ನಾರಾಯಣಗೌಡ ಅಸಮಾಧಾನ

ಬೆಂಗಳೂರು, ಮಾ. 23: ‘ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಒಟ್ಟು 1 ಸಾವಿರ ಕೋಟಿ ರೂ.ಗಳನ್ನು ಒದಗಿಸಲು ಮನವಿ ಮಾಡಿದ್ದು, ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿಗಳು ನೂರು ಕೋಟಿ ರೂ.ಗಳನ್ನಷ್ಟೇ ನೀಡಿದ್ದಾರೆ' ಎಂದು ಕ್ರೀಡಾ ಸಚಿವ ಡಾ.ನಾರಾಯಣಗೌಡ ಇಂದಿಲ್ಲಿ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ.
ಬುಧವಾರ ವಿಧಾನಸಭೆ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಶಾಸಕ ಐಹೋಳೆ ದುರ್ಯೋದನ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ರಾಜ್ಯದ ಎರಡು ಜಿಲ್ಲೆ ಮತ್ತು 64 ತಾಲೂಕು ಕೇಂದ್ರಗಳಲ್ಲಿ ಕ್ರೀಡಾಂಗಣ ಇಲ್ಲ. ಇಲಾಖೆಯಲ್ಲಿ ಅನುದಾನದ ಕೊರತೆ ಇದೆ. ಹೀಗಾಗಿ ಅನುದಾನ ಲಭ್ಯತೆಯನ್ನು ಆಧರಿಸಿ ಮುಂದಿನ ದಿನಗಳಲ್ಲಿ ಕ್ರೀಡಾಂಗಣ ನಿರ್ಮಿಸಲು ಆದ್ಯತೆ ನೀಡಲಾಗುವುದು' ಎಂದು ಸ್ಪಷ್ಟಪಡಿಸಿದರು.
ಪಿಪಿಪಿ ಮಾದರಿಯಲ್ಲಿ ಕ್ರೀಡಾಂಗಣ: ‘ಕ್ರೀಡೆಗಳ ಉತ್ತೇಜನ ದೃಷ್ಟಿಯಿಂದ ಖಾಸಗಿ-ಸಾರ್ವಜನಿಕ ಸಹಭಾಗಿತ್ವದಲ್ಲಿ ಕ್ರೀಡಾಂಗಣಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಕ್ರೀಡಾ ಸಂಕೀರ್ಣದಲ್ಲೇ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿ ಇಲಾಖೆಗೆ ಆದಾಯ ಬರುವ ರೀತಿಯಲ್ಲಿ ಯೋಜನೆ ರೂಪಿಸಲಾಗುತ್ತಿದೆ ಎಂದು ನಾರಾಯಣಗೌಡ, ಬಿಜೆಪಿ ಸದಸ್ಯ ಸುಕುಮಾರ ಶೆಟ್ಟಿ ಬಿ.ಎಂ. ಅವರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದರು.
‘ಬೈಂದೂರು ಕ್ಷೇತ್ರದಲ್ಲಿ ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಗುತ್ತಿಗೆದಾರರು ಯಾರೂ ಮುಂದೆ ಬರದಿದ್ದರೆ ಸರಕಾರವೇ ನೆರವು ನೀಡಿ ಕ್ರೀಡಾಂಗಣ ನಿರ್ಮಿಸಲು ಕ್ರಮ ವಹಿಸಲಿದೆ. ಹಣಕಾಸಿನ ಲಭ್ಯತೆಯನ್ನು ಆಧರಿಸಿ ಕ್ರೀಡಾಂಗಣ ನಿರ್ಮಿಸಲು ಸರಕಾರ ಮುಂದಾಗಲಿದೆ' ಎಂದು ನಾರಾಯಣಗೌಡ ತಿಳಿಸಿದರು.







