ದೇಶದಲ್ಲಿ 80 ಹೊಸ ವಿಮಾನ ನಿಲ್ದಾಣಕ್ಕೆ ಕೇಂದ್ರ ಸರ್ಕಾರ ಯೋಜನೆ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಮುಂದಿನ ಮೂರು ವರ್ಷಗಳಲ್ಲಿ ದೇಶದಲ್ಲಿ ಹೊಸದಾಗಿ 80 ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ.
ಇದು ಸಾಧ್ಯವಾದಲ್ಲಿ ದೇಶದ ವಿಮಾನ ನಿಲ್ದಾಣಗಳ ಸಂಖ್ಯೆ 2025ರ ವೇಳೆಗೆ 220ಕ್ಕೇರಲಿದೆ. ನಾಗರಿಕ ವಿಮಾನಯಾನ ಖಾತೆ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ ಅವರು ಲೋಕಸಭೆಯಲ್ಲಿ ಈ ವಿಷಯ ಪ್ರಕಟಿಸಿದ್ದು, ಕೋವಿಡ್-19 ಸಾಂಕ್ರಾಮಿಕದಿಂದ ಕಂಗೆಟ್ಟಿರುವ ಈ ವಲಯ ಶೀಘ್ರವೇ ಚೇರಿಸಿಕೊಳ್ಳಲಿದೆ ಎಂಬ ನಿರೀಕ್ಷೆಯನ್ನು ಅವರು ವ್ಯಕ್ತಪಡಿಸಿದ್ದಾರೆ.
ತಮ್ಮ ಸಚಿವಾಲಯದ ಅನುದಾನ ಮೇಲಿನ ಬೇಡಿಕೆಗಳ ಚರ್ಚೆಗೆ ಉತ್ತರಿಸಿದ ಅವರು, ಕಳೆದ ಒಂದು ವಾರದಲ್ಲಿ ದೇಶದಲ್ಲಿ ಸರಾಸರಿ ದಿನಕ್ಕೆ 3.82 ಲಕ್ಷ ಮಂದಿ ವಿಮಾನಯಾನ ಮಾಡುತ್ತಿದ್ದಾರೆ. 2023-24ರ ವೇಳೆಗೆ ವಿಮಾನ ಸಂಚಾರವನ್ನು ಮೂರು ಪಟ್ಟು ಹೆಚ್ಚಿಸಿ 2023-24ರ ವೇಳೆಗೆ 40 ಕೋಟಿಗೆ ಹೆಚ್ಚಿಸುವ ಗುರಿ ಇದೆ ಎಂದು ವಿವರಿಸಿದರು. ಜಾಗತಿಕ ಮಟ್ಟದಲ್ಲಿ ವಿಮಾನಯಾನ ಉದ್ಯಮ ಸಂಕಷ್ಟದಲ್ಲಿರುವ ನಡುವೆಯೇ ಭಾರತದಲ್ಲಿ ಎರಡು ಹೊಸ ಏರ್ಲೈನ್ಸ್ ಶೀಘ್ರವೇ ಸೇವೆ ಆರಂಭಿಸಲಿವೆ ಎಂದರು.
ದೇಶದಲ್ಲಿ 2014ರವರೆಗೆ ಒಟ್ಟು 74 ವಿಮಾನ ನಿಲ್ದಾಣಗಳಿದ್ದವು. ಕಳೆದ ಏಳು ವರ್ಷಗಳಲ್ಲಿ 66 ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗಿದೆ. ಏಳು ವರ್ಷಗಳಲ್ಲಿ ನಮ್ಮ ಸಾಮರ್ಥ್ಯವನ್ನು ಬಹುತೇಕ ದ್ವಿಗುಣಗೊಳಿಸಿದ್ದೇವೆ. ನಮ್ಮ ಮುಂದಿನ ಗುರಿ 2025ರ ವೇಳೆಗೆ 220 ವಿಮಾನ ನಿಲ್ದಾಣಗಳನ್ನು ನಿರ್ಮಿಸುವುದು ಎಂದು ಸ್ಪಷ್ಟಪಡಿಸಿದರು.
2021ರಲ್ಲಿ 8.38 ಕೋಟಿ ಪ್ರಯಾಣಿಕರು ದೇಶೀಯವಾಗಿ ವಿಮಾನಯಾನ ಕೈಗೊಂಡಿದ್ದಾರೆ. ಇದು 2020ರಲ್ಲಿ ಇದ್ದ 6.3 ಕೋಟಿಗೆ ಹೋಲಿಸಿದರೆ ಅಧಿಕ. 2013-14ರಲ್ಲಿ 6.70 ಕೋಟಿ ಇದ್ದ ವಿಮಾನಯಾನಿಗಳ ಸಂಖ್ಯೆ 2018-19ರ ವೇಳೆಗೆ 14.5ಕೋಟಿ ತಲುಪಿತ್ತು. ಅಂತೆಯೇ ವಿಮಾನಯಾನದ ಸ್ಥಳಗಳು ಕೂಡಾ 400 ರಿಂದ 710ಕ್ಕೇರಿದೆ ಎಂದು ಅಂಕಿ ಅಂಶ ನೀಡಿದರು.







