ಉಕ್ರೇನ್ಗೆ 6 ಸಾವಿರ ಕ್ಷಿಪಣಿ ಪೂರೈಸಲಿರುವ ಬ್ರಿಟನ್

ಫೈಲ್ ಫೋಟೊ
ಲಂಡನ್ : ಯುದ್ಧಪೀಡಿತ ಉಕ್ರೇನ್ ನೆರವಿಗೆ ಮುಂದಾಗಿರುವ ಬ್ರಿಟನ್, ರಷ್ಯಾ ನಡೆಸಿದ ಅತಿಕ್ರಮಣವನ್ನು ಎದುರಿಸಲು ಅನುವಾಗುವಂತೆ ಉಕ್ರೇನ್ಗೆ 6 ಸಾವಿರ ಹೊಸ ರಕ್ಷಣಾತ್ಮಕ ಕ್ಷಿಪಣಿಗಳನ್ನು ಪೂರೈಸಲಿದೆ. ಜತೆಗೆ ಯುದ್ಧದ ಬಗ್ಗೆ ವರದಿ ಮಾಡಲು ಬ್ರಿಟಿಷ್ ಬ್ರಾಡ್ ಕಾಸ್ಟಿಂಗ್ ಕಂಪನಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಹಾಗೂ ಉಕ್ರೇನ್ ಸೈನಿಕರು ಮತ್ತು ಪೈಲಟ್ಗಳಿಗೆ ವೇತನ ನೀಡುವ ಸಲುವಾಗಿ 40 ದಶಲಕ್ಷ ಡಾಲರ್ ನೆರವು ನೀಡಲಿದೆ.
ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಹೊಸ ನೆರವಿನ ಪ್ಯಾಕೇಜನ್ನು ಜಿ7 ಮುಖಂಡರ ಸಭೆಯಲ್ಲಿ ಗುರುವಾರ ಘೋಷಿಸಲಿದ್ದಾರೆ. ಉಕ್ರೇನ್ನ ರಕ್ಷಣಾತ್ಮಕ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸುವ ಇಂಗಿತವನ್ನೂ ವ್ಯಕ್ತಪಡಿಸಲಿದ್ದಾರೆ ಎಂದು ಅವರ ಕಚೇರಿ ಪ್ರಕಟಣೆ ಹೇಳಿದೆ.
"ಉಕ್ರೇನ್ಗೆ ಮಿಲಿಟರಿ ಮತ್ತು ಆರ್ಥಿಕ ಬೆಂಬಲ ನೀಡುವ ನಿಟ್ಟಿನಲ್ಲಿ ಬ್ರಿಟನ್ ನಮ್ಮ ಮಿತ್ರರಾಷ್ಟ್ರಗಳ ಜತೆಗೂಡಿ ಕಾರ್ಯ ನಿರ್ವಹಿಸಲಿದೆ. ಜತೆಗೆ ಯುದ್ಧದ ಅಲೆಯಲ್ಲಿ ಸಿಲುಕಿಕೊಂಡಿರುವ ಅವರ ರಕ್ಷಣಾ ಸಾಮರ್ಥ್ಯವನ್ನು ಬಲಪಡಿಸಲು ಕೂಡಾ ನೆರವಾಗಲಿದೆ" ಎಂದು ಜಾನ್ಸನ್ ಹೇಳಿದ್ದಾರೆ.
"ಈ ಯುದ್ಧ ಒಂದು ತಿಂಗಳನ್ನು ದಾಟಿದ್ದು, ಅಂತರರಾಷ್ಟ್ರೀಯ ಸಮುದಾಯ ಆಯ್ಕೆಗಳನ್ನು ಎರಿಸುತ್ತಿದೆ. ಉಕ್ರೇನ್ನಲ್ಲಿ ಸ್ವಾತಂತ್ರ್ಯದ ಜ್ಯೋತಿಯನ್ನು ಉಳಿಸಬೇಕು ಅಥವಾ ಯೂರೋಪ್ ಮತ್ತು ವಿಶ್ವಾದ್ಯಂತ ಅದನ್ನು ಹೊರ ತೆಗೆಯುವ ರಿಸ್ಕ್ ತೆಗೆದುಕೊಳ್ಳಬೇಕು" ಎಂದು ಹೇಳಿದ್ದಾರೆ.
ಈ ಪರಿಹಾರ ಪ್ಯಾಕೇಜ್ ನಡಿ 6000 ಕ್ಷಿಪಣಿಗಳನ್ನು ಬ್ರಿಟನ್ ಒದಗಿಸುವ ಜತೆಗೆ 25 ದಶಲಕ್ಷ ಪೌಂಡ್ ನೆರವನ್ನು ಉಕ್ರೇನ್ ಸೈನಿಕರಿಗೆ ವೇತನ ನೀಡುವ ಸಲುವಾಗಿ ಒದಗಿಸಲಿದೆ. ಜತೆಗೆ 4.1 ದಶಲಕ್ಷ ಪೌಂಡ್ ನೆರವನ್ನು ಬಿಬಿಸಿ ವಲ್ಡ್ ಸರ್ವೀಸ್ಗೆ ಒದಗಿಸಲಿದ್ದು, ಉಕ್ರೇನಿಯನ್ ಮತ್ತು ರಷ್ಯನ್ ಭಾಷಾ ಸೇವೆಗಳಿಗಾಗಿ ಮತ್ತು ಸುಳ್ಳು ಮಾಹಿತಿ ಪ್ರಸಾರವಾಗದಂತೆ ತಡೆಯುವ ಸಲುವಾಗಿ ನೀಡಲಿದೆ.







