ಕೊನೆಕ್ಷಣದಲ್ಲಿ ರೈಲು ರದ್ದು: ಪ್ರಯಾಣಿಕರ ಪರದಾಟ

ಸಾಂದರ್ಭಿಕ ಚಿತ್ರ
ಕಲ್ಬುರ್ಗಿ: ನೈರುತ್ಯ ರೈಲ್ವೆ ವತಿಯಿಂದ ವಿವಿಧ ರೈಲು ಹಳಿಗಳನ್ನು ದ್ವಿಗುಣಗೊಳಿಸುವ ಕಾಮಗಾರಿಯ ಸಲುವಾಗಿ ಕೆಲ ರೈಲುಗಳ ಸಂಚಾರವನ್ನು ಕೊನೆ ಕ್ಷಣದಲ್ಲಿ ರದ್ದುಪಡಿಸಿರುವ ಕಾರಣದಿಂದ ಪ್ರಯಾಣಿಕರು ಪರದಾಡುವ ಸ್ಥಿತಿ ಬುಧವಾರ ರಾತ್ರಿ ನಿರ್ಮಾಣವಾಯಿತು.
ಬಸವ ಎಕ್ಸ್ಪ್ರೆಸ್, ಬೀದರ್- ಯಶವಂತಪುರ ಎಕ್ಸ್ಪ್ರೆಸ್ ಸೇರಿದಂತೆ ಹಲವು ರೈಲುಗಳ ಸಂಚಾರವನ್ನು ರೈಲು ಹೊರಡುವ ಒಂದು ಗಂಟೆ ಮೊದಲಷ್ಟೇ ರದ್ದುಪಡಿಸಿದ ಅಧಿಕಾರಿಗಳ ಕ್ರಮ, ಪ್ರಯಾಣಿಕರ ಆಕ್ರೋಶಕ್ಕೂ ಕಾರಣವಾಯಿತು.
ಸೊಲ್ಲಾಪುರ- ಹಾಸನ ರೈಲು ಮತ್ತು ಉದ್ಯಾನ್ ಎಕ್ಸ್ಪ್ರೆಸ್ ರೈಲುಗಳು ತಲಾ 24 ಬೋಗಿಗಳನ್ನು ಹೊಂದಿದ್ದು, 1500 ಪ್ರಯಾಣಿಕರನ್ನು ಒಯ್ಯುವ ಸಾಮರ್ಥ್ಯ ಹೊಂದಿವೆ. ಅಂತೆಯೇ ಬೆಂಗಳೂರಿಗೆ ತೆರಳುವ ಬಸವ ಎಕ್ಸ್ಪ್ರೆಸ್, ಬೀದರ್-ಯಶವಂತಪುರ ರೈಲುಗಳು ತಲಾ 19 ಬೋಗಿ ಹೊಂದಿದ್ದು, ಈ ರೈಲುಗಳಿಗೆ ಅಧಿಕಾರಿಗಳ ಕೃಪಾಕಟಾಕ್ಷ ಇಲ್ಲ ಎಂದು ಕಲ್ಬುರ್ಗಿ ಸಾಮಾಜಿಕ ಕಾರ್ಯಕರ್ತ ಆನಂದ್ ದೇಶಪಾಂಡೆ ಹೇಳಿದರು.
"ರೈಲುಗಳನ್ನು ರದ್ದುಪಡಿಸುವ ವೇಳೆ ನೈರುತ್ಯ ರೈಲ್ವೆ ಅಧಿಕಾರಿಗಳು ಕಡಿಮೆ ಪ್ರಯಾಣಿಕರು ಓಡಾಡುವ ರೈಲು ರದ್ದುಪಡಿಸಬೇಕು. ಇತರ ವಲಯಗಳ ರೈಲುಗಳ ಸಂಚಾರವನ್ನೂ ಅವರು ರದ್ದುಪಡಿಸಿದ್ದಾರೆ. ಹಳಿ ದ್ವಿಗುಣಗೊಳಿಸುವ ಕಾಮಗಾರಿಯನ್ನು ನಾವು ವಿರೋಧಿಸುವುದಿಲ್ಲ. ರೈಲು ರದ್ದುಪಡಿಸಲು ಮಾನದಂಡ ಯಾವುದು ಎನ್ನುವುದನ್ನು ಸ್ಪಷ್ಟಪಡಿಸಬೇಕು" ಎಂದು ಅವರು ಆಗ್ರಹಿಸಿದರು.
ನೈರುತ್ಯ ರೈಲ್ವೆ ಎಂದೂ ಕಲ್ಯಾಣ ಕರ್ನಾಟಕದ ಪ್ರಯಾಣಿಕರ ಬೇಡಿಕೆಗಳನ್ನು ಆಲಿಸಿಲ್ಲ. ರದ್ದುಪಡಿಸಿದ ರೈಲುಗಳ ಸಂಚಾರವನ್ನು ಪುನರಾರಂಭಿಸಬೇಕು. ಉದಾಹರಣೆಗೆ ಉದ್ಯಾನ್ ಎಕ್ಸ್ಪ್ರೆಸ್ ರೈಲಿನ ಸಂಚಾರವನ್ನು ಮಾರ್ಚ್ 22ರಿಂದ 28ರವರೆಗೆ ರದ್ದುಪಡಿಸಲಾಗಿದೆ. ಆದರೆ ಟ್ವಿಟ್ಟರ್ನಲ್ಲಿ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮಾರ್ಚ್ 25ರಿಂದ ಆರಂಭವಾಗಲಿದೆ. ಅಂತೆಯೇ ಬೆಂಗಳೂರು- ದೆಹಲಿ ಕರ್ನಾಟಕ ಎಕ್ಸ್ಪ್ರೆಸ್ ರೈಲು ನಿರಾತಂಕವಾಗಿ ಓಡಾಡುತ್ತಿದೆ" ಎಂದು ಕಲ್ಯಾಣ ಕರ್ನಾಟಕ ಗ್ರಾಹಕ ವೇದಿಕೆಯ ಅಧ್ಯಕ್ಷ ಸುನೀಲ್ ಕುಲಕರ್ಣಿ ಹೇಳಿದ್ದಾರೆ.
ಸಾಮಾನ್ಯವಾಗಿ ರೈಲು ಹೊರಡುವ 24 ಗಂಟೆ ಮೊದಲು ರೈಲು ರದ್ದತಿ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಆದರೆ ಸಾಮಾನ್ಯವಾಗಿ ಜನರು 2-3 ತಿಂಗಳು ಮೊದಲೇ ಕಾಯ್ದಿರಿಸಿರುತ್ತಾರೆ. ಅವರ ಫೋನ್ಗಳಿಗೆ ಕನಿಷ್ಠ ಮಾಹಿತಿ ಕೂಡಾ ಸಿಗುವುದಿಲ್ಲ ಎಂದು ಅವರು ಆಪಾದಿಸಿದರು.
ರೈಲು ಕಲ್ಬುರ್ಗಿ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ಜನತೆಯ ಜೀವನಾಡಿಯಾಗಿದೆ ಎಂದು ಅವರು ಹೇಳಿದ್ದಾರೆ.







