ಚಿತ್ರದುರ್ಗ | ಬೈಕಿಗೆ ಬಸ್ ಢಿಕ್ಕಿ: ಒಂದೇ ಕುಟುಂಬದ ನಾಲ್ವರು ಮೃತ್ಯು

ಸಾಂದರ್ಭಿಕ ಚಿತ್ರ
ಚಿತ್ರದುರ್ಗ, ಮಾ.24: ದ್ವಿಚಕ್ರವೊಂದಕ್ಕೆ ಖಾಸಗಿ ಬಸ್ ಢಿಕ್ಕಿ ಹೊಡೆದ ಪರಿಣಾಮ ದಂಪತಿ, ಇಬ್ಬರು ಪುತ್ರರು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಘಟನೆ ಹೊಳಲ್ಕೆರೆ ತಾಲೂಕಿನ ದುಮ್ಮಿ ಗ್ರಾಮದ ಬಳಿ ಬುಧವಾರ ತಡರಾತ್ರಿ ನಡೆದಿರುವುದು ವರದಿಯಾಗಿದೆ.
ಹೊಳಲ್ಕೆರೆ ತಾಲೂಕಿನ ಬಿ. ದುರ್ಗಾ ಗ್ರಾಮದ ನಿವಾಸಿಗಳಾದ ನಾಗರಾಜ್ (43), ಅವರ ಪತ್ನಿ ಶೈಲಜಾ (38), ಪುತ್ರರಾದ ವೀರೇಶ್ (15) ಮತ್ತು ಸಂತೋಷ (13) ಮೃತಪಟ್ಟವರಾಗಿದ್ದಾರೆ.
ನಾಗರಾಜ್ ಕುಟುಂಬ ಸಮೇತ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಹೆಬ್ಬಳಗೆರೆ ಗ್ರಾಮದಲ್ಲಿ ನಡೆಯುವ ಜಾತ್ರೆಗೆ ತೆರಳಿದ್ದರು. ಜಾತ್ರೆ ಮುಗಿಸಿಕೊಂಡು ತಡರಾತ್ರಿ ಸ್ವಗ್ರಾಮಕ್ಕೆ ಬೈಕಿನಲ್ಲಿ ನಾಲ್ವರು ವಾಪಸ್ ಆಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಅತಿ ವೇಗ ಹಾಗೂ ಅಜಾಗರೂಕತೆಯಿಂದ ಬಂದ ಖಾಸಗಿ ಬಸ್ ಬಲಬದಿಗೆ ನುಗ್ಗಿ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದಿದೆ. ಇದರಿಂದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





