ಮಲ್ಲಾರು ಗುಜರಿ ಅಂಗಡಿಯಲ್ಲಿ ಸ್ಫೋಟ ಪ್ರಕರಣ: ಮೃತರ ಸಂಖ್ಯೆ ನಾಲ್ಕಕ್ಕೆ ಏರಿಕೆ

ನಯಾಝ್
ಕಾಪು, ಮಾ.24: ಮಲ್ಲಾರು ಗ್ರಾಮದ ಗುಡ್ಡೇಕೆರಿ ಸಲಫಿ ಮಸೀದಿ ಬಳಿಯ ಗುಜರಿ ಅಂಗಡಿಯಲ್ಲಿ ಮಾ.21ರಂದು ಸಂಭವಿಸಿದ ಸ್ಪೋಟದಿಂದ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ಮೃತಪಟ್ಟಿದ್ದು, ಈ ಮೂಲಕ ಈ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.
ಮೃತರನ್ನು ಸಾಗರ ಮೂಲದ ಚಂದ್ರನಗರದ ಜನತಾ ಕಾಲೋನಿ ನಿವಾಸಿ ನಯಾಝ್(32) ಹಾಗೂ ಬಾದಾಮಿ ಮೂಲದ ವಲಸೆ ಕಾರ್ಮಿಕ ಈರಪ್ಪ (27) ಎಂದು ಗುರುತಿಸಲಾಗಿದೆ. ಗಾಯಗೊಂಡವರ ಉಳಿದವರ ಪೈಕಿ ಪಾಲುದಾರ ಚಂದ್ರನಗರದ ಹಸನಬ್ಬ, ಬೆಳಪು ಗ್ರಾಪಂ ಸದಸ್ಯ ಫಾಹೀಂ ಬೆಳಪು ಮಣಿಪಾಲ ಆಸ್ಪತ್ರೆಯಲ್ಲಿ ಹಾಗೂ ವಲಸೆ ಕಾರ್ಮಿಕ ವೀರೇಶ್ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಯಾಝ್, ಪತ್ನಿ, ಮೂವರು ಪುತ್ರರನ್ನು ಅಗಲಿದ್ದಾರೆ. ಇವರ ಪತ್ನಿ ಮೂರು ತಿಂಗಳ ಹಿಂದೆಯಷ್ಟೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ಈರಪ್ಪ ಕಾಪು ಪರಿಸರದಲ್ಲಿ ದಿನಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದು, ಮಾ.21ರಂದು ಅವರನ್ನು ವೀರೇಶ್ ಜೊತೆ ಗುಜರಿ ಅಂಗಡಿಯ ದಿನಕೂಲಿ ಕೆಲಸಕ್ಕೆ ಕರೆದುಕೊಂಡು ಹೋಗಲಾಗಿತ್ತು. ಸ್ಪೋಟ ಸಂಭವಿಸುವ ವೇಳೆ ಈರಪ್ಪ ಅಂಗಡಿಯೊಳಗೆ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಮಾ.21ರಂದು ಗುಜರಿ ಅಂಗಡಿಗೆ ಬಂದಿದ್ದ ಬೋಟಿಗೆ ಸಂಬಂಧಿಸಿದ ಕಂಪ್ರೆಸರ್ನ್ನು ಗ್ಯಾಸ್ ಕಟ್ಟರ್ ಮೂಲಕ ಕಟ್ ಮಾಡುತ್ತಿದ್ದ ವೇಳೆ ಸ್ಪೋಟ ಸಂಭವಿಸಿತ್ತು. ಇದರಿಂದ ಗುಜರಿ ಅಂಗಡಿಯ ಪಾಲುದಾರರಾದ ಚಂದ್ರನಗರದ ರಜಬ್(44) ಹಾಗೂ ಮಲ್ಲಾರು ಗುಡ್ಡಿಕೇರಿಯ ರಜಬ್(43) ಎಂಬವರು ಸಜೀವ ದಹನಗೊಂಡಿದ್ದರು. ಅಂಗಡಿಯೊಳಗೆ ಕೆಲಸ ಮಾಡುತ್ತಿದ್ದ ಉಳಿದ ನಾಲ್ಕು ಮಂದಿ ಮತ್ತು ಬೆಂಕಿ ನಂದಿಸಲು ಬಂದಿದ್ದ ಫಾಹೀಮ್ ಬೆಳಪು ಗಾಯಗೊಂಡಿದ್ದರು. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಂಪ್ರೆಸರ್ ಬಗ್ಗೆ ಎಚ್ಚರಿಕೆಯ ಸಂದೇಶ
ಸ್ಪೋಟಕ್ಕೆ ಕಾರಣವಾದ ಬೋಟಿನ ಕಂಪ್ರೆಸರ್ ಬಗ್ಗೆ ಜಾಗೃತೆ ವಹಿಸುವಂತೆ ಗುಜರಿ ಅಂಗಡಿಯವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಸಲಾಗುತ್ತಿದೆ.ಯಾವುದೇ ಕಾರಣಕ್ಕೂ ಗುಜರಿಗೆ ಬಂದ ಬೋಟಿನ ಕಂಪ್ರೆಸರ್ನ್ನು ಕಟ್ ಮಾಡದಿರುವಂತೆ ಎಚ್ಚರಿಕೆಯ ಸಂದೇಶವನ್ನು ಸಾಮಾಜಿಕ ಜಾಲತಾಣಗಳಲ್ಲಿ ರವಾನಿಸಲಾಗುತ್ತಿದೆ. ಇದರೊಳಗೆ ಇರುವ ಗ್ಯಾಸ್, ಸ್ಪೋಟಕ್ಕೆ ಕಾರಣವಾಗುತ್ತಿದೆ ಎಂದು ಹೇಳಲಾಗುತ್ತಿದೆ.
