"ಈ ಪ್ರಕರಣಕ್ಕೂ ಪರೀಕ್ಷೆಗೂ ಸಂಬಂಧವಿಲ್ಲ": ಹಿಜಾಬ್ ಪ್ರಕರಣದ ತುರ್ತು ವಿಚಾರಣೆಗೆ ಸುಪ್ರೀಂಕೋರ್ಟ್ ಸಿಜೆಐ ಅಸಮ್ಮತಿ
ಹೊಸದಿಲ್ಲಿ,ಮಾ.24: ಶಾಲಾ-ಕಾಲೇಜುಗಳ ಆವರಣಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸುವ ಶಿಕ್ಷಣ ಸಂಸ್ಥೆಗಳ ಅಧಿಕಾರವನ್ನು ಎತ್ತಿ ಹಿಡಿದಿರುವ ಕರ್ನಾಟಕ ಉಚ್ಚ ನ್ಯಾಯಾಲಯದ ತೀರ್ಪಿನ ವಿರುದ್ಧದ ಪ್ರಕರಣದ ತುರ್ತು ವಿಚಾರಣೆಯನ್ನು ಕೋರಿ ಸಲ್ಲಿಸಲಾದ ಅರ್ಜಿಗಳನ್ನು ಗುರುವಾರ ವಜಾಗೊಳಿಸಿರುವ ಸರ್ವೋಚ್ಚ ನ್ಯಾಯಾಲಯವು, ವಿಷಯವನ್ನು ಸೂಕ್ಷ್ಮಗೊಳಿಸದಂತೆ ವಕೀಲರಿಗೆ ಸೂಚಿಸಿತು. ಅರ್ಜಿಗಳ ವಿಚಾರಣೆಗೆ ನಿರ್ದಿಷ್ಟ ದಿನಾಂಕವನ್ನು ನೀಡಲೂ ಸರ್ವೋಚ್ಚ ನ್ಯಾಯಾಲಯವು ನಿರಾಕರಿಸಿತು.
ವಿಚಾರಣೆ ವಿಳಂಬಗೊಂಡರೆ ವಿದ್ಯಾರ್ಥಿನಿಯರಿಗೆ ತಮ್ಮ ಪರೀಕ್ಷೆಗಳಿಗೆ ಹಾಜರಾಗಲು ಸಾಧ್ಯವಾಗುವುದಿಲ್ಲ,ಹೀಗಾಗಿ ಮುಂದಿನ ವಾರವೇ ವಿಚಾರಣೆಯನ್ನು ನಡೆಸಬೇಕು ಎಂಬ ವಕೀಲರ ಕೋರಿಕೆಗೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರು,ಅದಕ್ಕೂ ಪರೀಕ್ಷೆಗಳಿಗೂ ಯಾವುದೇ ಸಂಬಂಧವಿಲ್ಲ, ವಿಷಯವನ್ನು ಸೂಕ್ಷ್ಮಗೊಳಿಸಬೇಡಿ ಎಂದು ತಿಳಿಸಿದರು.
ಶೀಘ್ರವೇ ಪರೀಕ್ಷೆಗಳು ಆರಂಭಗೊಳ್ಳಲಿವೆ ಎಂದು ತಿಳಿಸಿದ ಅರ್ಜಿದಾರರ ಪರ ವಕೀಲ ದೇವದತ್ ಕಾಮತ್ ಅವರು,ಒಂದು ವರ್ಷವು ವ್ಯರ್ಥವಾಗುತ್ತದೆ. ಈ ಎಲ್ಲ ವಿದ್ಯಾರ್ಥಿನಿಯರು ಶಾಲೆಗಳನ್ನು ಪ್ರವೇಶಿಸುವುದನ್ನು ತಡೆಯಲಾಗುತ್ತಿದೆ. ಮಾನ್ಯ ನ್ಯಾಯಾಧೀಶರು ಮುಂದಿನ ವಾರ ದಿನಾಂಕವೊಂದನ್ನು ನಿಗದಿಗೊಳಿಸಬಹುದು ಎಂದು ಹೇಳಿದರು.
ಆದರೆ ಇದನ್ನು ಪುರಸ್ಕರಿಸದ ಮುಖ್ಯ ನ್ಯಾಯಮೂರ್ತಿಗಳು ಮುಂದಿನ ಪ್ರಕರಣವನ್ನು ಕೈಗೆತ್ತಿಕೊಳ್ಳುವಂತೆ ನ್ಯಾಯಾಲಯದ ಸಿಬ್ಬಂದಿಗೆ ಸೂಚಿಸಿದರು.
ಹಿಜಾಬ್ ವಿವಾದದ ಬಗ್ಗೆ ತುರ್ತು ವಿಚಾರಣೆ ನಡೆಸಲು ಸರ್ವೋಚ್ಚ ನ್ಯಾಯಾಲಯವು ಈ ಮೊದಲೂ ನಿರಾಕರಿಸಿತ್ತು.