"ಒಮ್ಮೆ ಬಂದು ಅಮ್ಮನನ್ನು ಭೇಟಿಯಾಗಿ": ಸಿಎಂ ಆದಿತ್ಯನಾಥ್ ಗೆ ಸಹೋದರಿಯಿಂದ ಮನವಿ
ಡೆಹ್ರಾಡೂನ್: ಎರಡನೇ ಅವಧಿಗೆ ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಆದಿತ್ಯನಾಥ್ ರಿಗೆ ಅವರ ಸಹೋದರಿ ಒಮ್ಮೆ ಬಂದು ತಾಯಿಯನ್ನು ನೋಡಿ ಹೋಗಬೇಕೆಂಬ ಮನವಿ ಮಾಡಿದ್ದಾರೆ. ನಾಳೆ ಉತ್ತರಪ್ರದೇಶ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿರುವ ಹಿನ್ನೆಲೆಯಲ್ಲಿ Timesnow ವಾಹಿನಿಯೊಂದಿಗೆ ಮಾತನಾಡಿದ ಆದಿತ್ಯನಾಥ್ ಸಹೋದರಿ ಶಶಿ ಸಿಂಗ್ ಈ ಮನವಿಯನ್ನು ಮಾಡಿದ್ದಾರೆ. ಅವರ ತಾಯಿ ಉತ್ತರಾಖಂಡದಲ್ಲಿ ನೆಲೆಸಿದ್ದಾರೆ.
ಆದಿತ್ಯನಾಥ್ ಉತ್ತರಾಖಂಡದ ಪಂಚೂರು ಗ್ರಾಮದಲ್ಲಿ ಜನಿಸಿದ್ದು, 18ನೇ ವಯಸ್ಸಿನಲ್ಲೇ ಮನೆ ಬಿಟ್ಟು ಉತ್ತರಪ್ರದೇಶದ ಗೋರಖ್‌ಪುರಕ್ಕೆ ತೆರಳಿದ್ದರು. "ಆತ ಮನೆಬಿಟ್ಟು ತೆರಳುವಾಗ ತಾನು ಸನ್ಯಾಸಿಯಾಗಲು ಹೊರಡುತ್ತಿದ್ದೇನೆ ಎಂದು ಹೇಳಲೇ ಇಲ್ಲ. ಒಮ್ಮೆ ಬಂದು ತಾಯಿಯನ್ನು ಭೇಟಿ ಮಾಡಲಿ ಎನ್ನುವುದು ಅವರಿಗೆ ನನ್ನ ಸಂದೇಶವಾಗಿದೆ" ಎಂದು ಸಹೋದರಿ ತಿಳಿಸಿದ್ದಾಗಿ ವರದಿ ಉಲ್ಲೇಖಿಸಿದೆ.
ಇತ್ತೀಚೆಗೆ ನಡೆದ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಪಕ್ಷವು 403 ಸೀಟುಗಳಲ್ಲಿ 275 ಸೀಟುಗಳನ್ನು ಗೆದ್ದಿತ್ತು. ಐದು ವರ್ಷದ ಆಡಳಿತ ಪೂರೈಸಿ ಮತ್ತೊಮ್ಮೆ ಆಡಳಿತ ಗಾದಿಗೇರಿ ಆದಿತ್ಯನಾಥ್ ಇತಿಹಾಸ ಸೃಷ್ಟಿಸಿದ್ದರು.