ಬಪ್ಪನಾಡು ವಿವಾದಕ್ಕೆ ಜಿಲ್ಲಾಡಳಿತವೇ ಕುಮ್ಮಕ್ಕು: ಮಿಥುನ್ ರೈ ಆರೋಪ

ಮಂಗಳೂರು, ಮಾ. 24: ದಕ್ಷಿಣ ಕನ್ನಡ ಜಿಲ್ಲೆಯ ಸೌಹಾರ್ದ, ಐಕ್ಯದ ಕ್ಷೇತ್ರವಾಗಿರುವ ಬಪ್ಪನಾಡು ಜಾತ್ರೋತ್ಸವದ ಸಂದರ್ಭ ಮುಸ್ಲಿಮ್ ವ್ಯಾಪಾರಸ್ಥರಿಗೆ ಅವಕಾಶವಿಲ್ಲ ಎಂದು ಹೇಳಿ ಬ್ಯಾನರ್ ಹಾಕಿರುವುದರ ಹಿಂದೆ ಜಿಲ್ಲಾಡಳಿತದ ಕುಮ್ಮಕ್ಕು ಇರುವ ಅನುಮಾನ ಕಾಡುತ್ತಿದೆ ಎಂದು ಕಾಂಗ್ರೆಸ್ ಯುವ ಮುಖಂಡ ಮಿಥುನ್ ರೈ ಆರೋಪಿಸಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾವು ಆ ಬ್ಯಾನರ್ ಹಾಕಿಲ್ಲ. ಇದಕ್ಕೂ ತಮಗೂ ಯಾವುದೇ ಸಂಬಂಧ ಇಲ್ಲ ಎಂದು ಕ್ಷೇತ್ರದ ಆಡಳಿತ ಸಮಿತಿ ಸ್ಪಷ್ಟನೆ ನೀಡಿದ್ದರೂ ಇನ್ನೂ ಬ್ಯಾನರ್ ತೆರವುಗೊಳಿಸುವ ಕಾರ್ಯವನ್ನು ಜಿಲ್ಲಾಡಳಿತ ಮಾಡಿಲ್ಲ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಕೂಡಾ ವೌನ ವಹಿಸಿದ್ದಾರೆ ಎಂದು ಜಿಲ್ಲಾಡಳಿತದ ವಿರುದ್ಧ ವಾಗ್ದಾಳಿ ನಡೆಸಿದರು.
ಯಾವುದೇ ಧಾರ್ಮಿಕ ಕ್ಷೇತ್ರಗಳ ಆಡಳಿತ ಸಮಿತಿಯು ಕೈಗೊಳ್ಳುವ ನಿರ್ಧಾರದ ಬಗ್ಗೆ ನಮ್ಮ ಆಕ್ಷೇಪವಿಲ್ಲ. ಅದು ಬಿಟ್ಟು ಕಿಡಿಗೇಡಿಗಳು, ಸೌಹಾರ್ದ ಕೆಡಿಸಲು ಯಾವುದೇ ಧರ್ಮ, ಜಾತಿಯವರು, ಸಂಘಟನೆಗಳವರು ಇಂತಹ ಕಾರ್ಯ ಮಾಡಿದರೂ ಖಂಡಿಸುವುದಾಗಿ ಮಿಥುನ್ ರೈ ಹೇಳಿದರು.
ಬಪ್ಪನಾಡು ಬಪ್ಪ ಬ್ಯಾರಿಗಳಿಗೆ ಒಲಿದ ಕ್ಷೇತ್ರ. ಅಲ್ಲಿ ನಿನ್ನೆ ನಡೆದ ರಥೋತ್ಸವಕ್ಕೆ ಲಕ್ಷಾಂತರ ಚೆಂಡು ಮಲ್ಲಿಗೆಯನ್ನು ಹಾಕಲಾಗಿದೆ. ಶಂಕರಪುರದಲ್ಲಿ ಮಲ್ಲಿಗೆ ಬೆಳೆಯುವವರು ಹೆಚ್ಚಿನವರು ಕ್ರೈಸ್ತ ಸಮುದಾಯದವರು. ಅದನ್ನು ಖರೀದಿಸಿ ಮಾರುಕಟ್ಟೆ ಮಾಡುವವರು ಬಹುತೇಕರು ಮುಸ್ಲಿಮ್ ಸಮುದಾಯದವರು. ಅದನ್ನು ಖರೀದಿಸಿ ದೇವರಿಗೆ ಅರ್ಪಣೆ ಮಾಡುವವರು ಬಹುತೇಕರು ಹಿಂದೂ ಬಾಂಧವರು. ಹಾಗಾಗಿ ಬಪ್ಪನಾಡು ಕ್ಷೇತ್ರ ಈ ಮೂಲಕವೂ ಸೌಹಾರ್ದಕ್ಕೆ ನೈಜ ಉದಾಹರಣೆಯಾಗಿದೆ. ಆದರೆ ಇಲ್ಲಿಯೂ ಜಾತಿ, ಧರ್ಮದ ಬಣ್ಣ ತಂದು, ಬಡಪಾಯಿ ವ್ಯಾಪಾರಿಗಳ ಜೀವನಕ್ಕೆ ಕಲ್ಲು ಹಾಕುವವರನ್ನು ಕ್ಷೇತ್ರದ ತಾಯಿ ಕೂಡ ಮೆಚ್ಚಲಾರರು. ಇದು ಎಲ್ಲರ ಮನಸ್ಸಿಗೆ ನೋವು ತರುವ ವಿಚಾರ ಎಂದು ಮಿಥುನ್ ರೈ ಹೇಳಿದರು.
ಆಡಳಿತ ಸಮಿತಿಯವರು ಸ್ಪಷ್ಟನೆ ನೀಡಿ ವ್ಯಾಪಾರ ನಡೆಸಬಹುದು ಎಂದು ಹೇಳಿದರೂ ಮುಸ್ಲಿಂ ವ್ಯಾಪಾರಿಗಳು ಹಿಂದೇಟು ಹಾಕಿದ್ದಾರೆಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಿಥುನ್ ರೈ, ಅಲ್ಲಿಗೆ ವ್ಯಾಪಾರಕ್ಕೆ ಬರುವವರು ಬಡಪಾಯಿಗಳು. ಈ ರಾಜಕೀಯ ಅವರಿಗೆ ಬೇಕಾಗಿಲ್ಲ. ಅವರಿಗೆ ಹೊಟ್ಟೆಪಾಡು. ಅಲ್ಲಿ ಗಲಭೆ ಆದರೆ ಯಾರು ಹೊಣೆ. ಈ ವಿಚಾರದಲ್ಲಿ ಜಿಲ್ಲಾಧಿಕಾರಿಯಾಗಲಿ, ಸ್ಥಳೀಯ ಶಾಸಕರು ಅಥವಾ ಜಿಲ್ಲಾ ಉಸ್ತುವಾರಿ ಸಚಿವರು ನಾವು ನಿಮ್ಮ ಜತೆಗಿದ್ದೇವೆ ಎಂಬ ಯಾವುದೇ ಧೈರ್ಯ ತುಂಬುವ ಮಾತನ್ನು ಹೇಳಿಲ್ಲ. ಹಾಗಿರುವಾಗ ಯಾವ ಧೈರ್ಯದಲ್ಲಿ ಬಡಪಾಯಿಗಳು ವ್ಯಾಪಾರಕ್ಕೆ ಬರುತ್ತಾರೆ ಎಂದು ಪ್ರಶ್ನಿಸಿದರು.
ದ.ಕ. ಜಿಲ್ಲೆಯನ್ನು ಕೋಮು ಗಲಭೆಗೆ ಪ್ರಯೋಗಶಾಲೆಯಾಗಿ ಉಪಯೋಗಿಸುವ ಕೆಲಸವನ್ನು ಮಾಡಲಾಗುತ್ತಿದ್ದು, ಪುಂಡ ಪೋಕರಿಗಳ ಕೆಲಸಕ್ಕೆ ಜಿಲ್ಲಾಡಳಿತ ಕಡಿವಾಣ ಹಾಕಬೇಕು. ಜಿಲ್ಲಾಡಳಿತ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುವ ಮೂಲಕ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಮಿಥುನ್ ರೈ ಎಚ್ಚರಿಸಿದರು.
ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ನೀಡಿರುವ ತೀರ್ಪನ್ನು ವಿರೋಧಿಸಿ ಬಂದ್ ಮಾಡಿರುವುದಕ್ಕೆ ಪ್ರತಿಕ್ರಿಯೆಯಾಗಿ ಈ ಕೃತ್ಯ ನಡೆದಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಿಥುನ್ ರೈ, ಕಾನೂನಿಗೆ ಗೌರವ ಕೊಡುವುದು ಎಲ್ಲರ ಕರ್ತವ್ಯ ಎಂಬುದನ್ನು ನಮ್ಮ ಎಲ್ಲಾ ನಾಯಕರೂ ಸ್ಪಷ್ಟಪಡಿಸಿದ್ದಾರೆ. ನಾನೂ ಅದನ್ನೇ ಹೇಳುತ್ತೇನೆ. ದೇವರು, ಧರ್ಮ ಎಲ್ಲವೂ ನಮ್ಮ ಮನೆಗೆ ಸೀಮಿತವಾಗಿರಬೇಕು. ಮನೆಯ ಹೊರಗೆ ಸಂವಿಧಾನವೇ ನಮಗೆ ಎಲ್ಲಾ. ಆದರೆ ಹಿಜಾಬ್‌ಗೂ ಈ ವಿಚಾರಕ್ಕೂ ಯಾವುದೇ ಸಂಬಂಧವಿಲ್ಲ. ಇದು ಬಡ ವ್ಯಾಪಾರಿಗಳ ಮೇಲಿನ ದೌರ್ಜನ್ಯ. ಸೌಹಾರ್ದದ ಕ್ಷೇತ್ರದಲ್ಲಿ ಜಾತಿ, ಧರ್ಮದ ವಿಷ ಬೀಜ ಬಿತ್ತುವ ಕೆಲಸ ಯಾರು ಮಾಡಿದರೂ ತಪ್ಪೇ ಎಂದು ಹೇಳಿದರು.
ಹೈಕೋರ್ಟ್ ತೀರ್ಪನ್ನು ಧಿಕ್ಕರಿಸಿ ನಡೆಯುತ್ತಿರುವ ಪ್ರತಿರೋಧ ತಪ್ಪಲ್ಲವೇ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಾಜಿ ಸಚಿವ ಅಭಯ ಚಂದ್ರ ಜೈನ್, ಇಂತಹ ಯಾವುದೇ ರೀತಿಯ ಪ್ರತಿರೋಧವನ್ನು ನಿಯಂತ್ರಿಸುವುದು, ಸಮುದಾಯಕ್ಕೆ ಮನವರಿಕೆ ಮಾಡುವುದು ಮುಖ್ಯಮಂತ್ರಿಯ ಜವಾಬ್ದಾರಿ. ಮತ್ತೆ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಯಾಕೆ ಎಂದು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಮೋಹನ್ ಕೋಟ್ಯಾನ್, ಉಮೇಶ್ ದಂಡಕೇರಿ, ವಸಂತ ಬರ್ನಾಡ್, ಮನ್ಸೂರ್ ಸಾಬ್, ಮಿರ್ಝಾ ಸಾಬ್, ಮಯ್ಯದಿ, ನಿತ್ಯಾನಂದ ಶೆಟ್ಟಿ ಉಪಸ್ಥಿತರಿದ್ದರು.







