ಮಂಡ್ಯದಲ್ಲಿ 'ಕಾಶ್ಮೀರ್ ಫೈಲ್ಸ್' ಸಿನೆಮಾಕ್ಕೆ ಪ್ರೇಕ್ಷಕರಿಲ್ಲ: ಉಚಿತ ಪ್ರದರ್ಶನ ವ್ಯವಸ್ಥೆ ಮಾಡಿದ ಬಿಜೆಪಿ ಮುಖಂಡ!

'ದಿ ಕಾಶ್ಮೀರ್ ಫೈಲ್ಸ್' ಸಿನೆಮಾ ಉಚಿತ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸಿರುವ ಡಾ.ಎನ್.ಎಸ್.ಇಂದ್ರೇಶ್
ಮಂಡ್ಯ, ಮಾ.24: ಪಾಂಡವಪುರ ಪಟ್ಟಣದ ಕೋಕಿಲ ಚಿತ್ರಮಂದಿರದಲ್ಲಿ ಪ್ರದರ್ಶಶಿಸಲ್ಪಡುತ್ತಿರುವ 'ದಿ ಕಾಶ್ಮೀರ್ ಫೈಲ್ಸ್' ಸಿನೆಮಾ ವೀಕ್ಷಣೆಗೆ ಪ್ರೇಕ್ಷಕರಿಲ್ಲದ ಕಾರಣ ಬಿಜೆಪಿ ಮುಖಂಡರೊಬ್ಬರು ಉಚಿತ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಿದ್ದಾರೆ.
ಬಿಜೆಪಿ ಮುಖಂಡ, ಪರಿವರ್ತನಾ ಟ್ರಸ್ಟ್ ಅಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್ ಅಭಿಮಾನಿಗಳ ಬಳಗದ ವತಿಯಿಂದ ಬುಧವಾರ ಮತ್ತು ಗುರುವಾರ ಚಿತ್ರವನ್ನು ಸಾರ್ವಜನಿಕರಿಗೆ ಉಚಿತವಾಗಿ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಅದರಂತೆ ಇಂದ್ರೇಶ್ ಅಭಿಮಾನಿಗಳು ಹಾಗೂ ಕೆಲವು ಸಾರ್ವಜನಿಕರು ಉಚಿತವಾಗಿ ಚಲನಚಿತ್ರ ವೀಕ್ಷಣೆ ಮಾಡುತ್ತಿದ್ದಾರೆ.
ಈ ಸಂದರ್ಭದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಡಾ.ಎನ್.ಎಸ್.ಇಂದ್ರೇಶ್, `ದಿ ಕಾಶ್ಮೀರ್ ಫೈಲ್ಸ್' ಚಲನಚಿತ್ರವು ಕಾಶ್ಮೀರದ ನೈಜತೆಯನ್ನು ಬಿಂಬಿಸಿದೆ. ಹೀಗಾಗಿ ಪ್ರತಿಯೊಬ್ಬ ಹಿಂದೂಗಳು ಹಾಗೂ ಇಡೀ ಭಾರತೀಯರು ನೋಡಲೇಬೇಕಾದ ಶ್ರೇಷ್ಟ ಚಿತ್ರವಾಗಿದೆ ಎಂದು ಹೇಳಿದರು.
ಕಾಶ್ಮೀರದ ಇತಿಹಾಸ ಹಾಗೂ ಹಿಂದುತ್ವವನ್ನು ತಿಳಿಸುವಂತಹ ಉತ್ತಮ ಚಿತ್ರ. ಯಾರಿಗೆ ರಾಷ್ಟ್ರೀಯತೆ, ಹಿಂದುತ್ವ ಹಾಗೂ ಈ ದೇಶದ ಬಗ್ಗೆ ಅಪಾರವಾದ ಅಭಿಮಾನ ಹಾಗೂ ದೇಶಭಕ್ತಿ ಇದೆಯೋ ಅವರು ತಪ್ಪದೇ ಈ ಚಲನಚಿತ್ರವನ್ನು ನೋಡುತ್ತಾರೆ ಎಂದರು.
ಈ ವೇಳೆ ಬಿಜೆಪಿ ಮುಖಂಡರಾದ ಎಸ್ಎನ್ಟಿ ಸೋಮಶೇಖರ್, ಬಳಘಟ್ಟ ಅಶೋಕ, ರಾಜೀವ್ ತಮ್ಮಣ್ಣ, ಕೋಡಾಲ ಅಶೋಕ್, ಅರಕನಕೆರೆ ಪುರುಷೋತ್ತಮ್, ಕೋಕಿಲಾ ಚಿತ್ರಮಂದಿರದ ಸಿಬ್ಬಂದಿಯಾದ ಹಾರೋಹಳ್ಳಿ ನಾರಾಯಣಪ್ಪ, ಅಶೋಕಣ್ಣ ಸೇರಿದಂತೆ ಡಾ.ಎ.ಎನ್.ಇಂದ್ರೇಶ್ ಅಭಿಮಾನಿಗಳ ಬಳಗದವರು ಉಪಸ್ಥಿತರಿದ್ದರು.
10 ಟಿಕೆಟ್ ಖರೀದಿಸಿ ಒಬ್ಬನೇ ಸಿನೆಮಾ ವೀಕ್ಷಿಸಿದ್ದ!
ಮಂಗಳವಾರ(ಮಾ.22)ವೂ ಕೋಕಿಲ ಚಿತ್ರಮಂದಿರದಲ್ಲಿ ಇದೇರೀತಿ 'ದಿ ಕಾಶ್ಮೀರ ಫೈಲ್ಸ್' ಚಲನಚಿತ್ರಕ್ಕೆ ಪ್ರೇಕ್ಷಕರ ಕೊರತೆ ಸಮಸ್ಯೆ ಆದಾಗ ವ್ಯಕ್ತಿಯೋರ್ವ ಏಕಾಂಗಿಯಾಗಿ 10 ಟಿಕೆಟ್ ಖರೀದಿಸಿ ಒಬ್ಬನೇ ಸಿನೆಮಾ ವೀಕ್ಷಿಸಿದ್ದ!
ಪಾಂಡವಪುರ ಟೌನ್ ಹಾರೋಹಳ್ಳಿ ಗ್ರಾಮದ ನಿವಾಸಿ ಡೈಮೆಂಡ್ ರವಿ ಎಂಬವರು ಕೋಕಿಲ ಚಿತ್ರಮಂದಿರಕ್ಕೆ ತೆರಳಿದಾಗ, ಚಿತ್ರಮಂದಿರದಲ್ಲಿ ಚಲನಚಿತ್ರ ವೀಕ್ಷಿಸಲು ಯಾರೂ ಬಂದಿರಲಿಲ್ಲ. ಹಾಗಾಗಿ ಚಿತ್ರಮಂದಿರದ ವ್ಯವಸ್ಥಾಪಕರು ಚಲನಚಿತ್ರ ಪ್ರದರ್ಶನ ಇಲ್ಲವೆಂದು ಹೇಳಿದ್ದಾರೆ. ಈ ವೇಳೆ ಡೈಮೆಂಡ್ ರವಿ 10 ಟಿಕೆಟ್ ಖರೀದಿಸಿ ಒಬ್ಬನೇ ಚಿತ್ರ ವೀಕ್ಷಿಸಿದ್ದಾನೆ ಎಂದು ತಿಳಿದುಬಂದಿದೆ.







