"ಉಕ್ರೇನ್ ಸನ್ನಿವೇಶಕ್ಕೂ ಭಾರತದ ವ್ಯಾಪಾರ, ವಹಿವಾಟುಗಳಿಗೆ ಸಂಬಂಧ ಕಲ್ಪಿಸುವ ಪ್ರಶ್ನೆಯೇ ಇಲ್ಲ, ನಾವು ಶಾಂತಿಯ ಪರ"
ವಿದೇಶಾಂಗ ಸಚಿವ ಎಸ್. ಜೈಶಂಕರ್

ಹೊಸದಿಲ್ಲಿ,ಮಾ.24: ಭಾರತದ ವಿದೇಶಾಂಗ ನೀತಿ ನಿರ್ಧಾರಗಳನ್ನು ರಾಷ್ಟ್ರೀಯ ಹಿತಾಸಕ್ತಿಯಲ್ಲಿ ತೆಗೆದುಕೊಳ್ಳಲಾಗುತ್ತಿದೆ ಮತ್ತು ಅಂತರರಾಷ್ಟ್ರೀಯ ವ್ಯವಸ್ಥೆಯು ದೇಶಗಳ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತೆಯನ್ನು ಗೌರವಿಸಬೇಕು ಎಂಬ ನಂಬಿಕೆಯಿಂದ ನಿರ್ದೇಶಿತವಾಗಿವೆ ಎಂದು ಗುರುವಾರ ರಾಜ್ಯಸಭೆಯಲ್ಲಿ ತಿಳಿಸಿದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು, ಹಿಂಸಾಚಾರವನ್ನು ತಕ್ಷಣ ನಿಲ್ಲಿಸುವಂತೆ ಭಾರತವು ಕರೆ ನೀಡುತ್ತದೆ ಮತ್ತು ಅದು ಶಾಂತಿಯ ಪರವಾಗಿದೆ ಎಂದರು.
ರಶ್ಯ-ಉಕ್ರೇನ್ ಸಂಘರ್ಷ ಕುರಿತು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಿದ್ದ ಅವರು,‘ನಮ್ಮ ನೀತಿಗಳ ಕುರಿತು ನಾವು ಅತ್ಯಂತ ಸ್ಪಷ್ಟವಾಗಿದ್ದೇವೆ. ಅಂತರರಾಷ್ಟ್ರೀಯ ವ್ಯವಸ್ಥೆಯು ದೇಶಗಳ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತೆಯನ್ನು ಗೌರವಿಸಬೇಕು ಎಂಬ ನಮ್ಮ ನಂಬಿಕೆಯಿಂದ ನಮ್ಮ ನೀತಿಯು ನಿರ್ದೇಶಿತವಾಗಿದೆ ’ಎಂದು ಹೇಳಿದರು.
‘ರಶ್ಯ ಮತ್ತು ಉಕ್ರೇನ್ನ್ನು ಒಳಗೊಂಡಿರುವ ಸ್ಥಿತಿಯು ನಮ್ಮ ಸಮಸ್ಯೆಯಲ್ಲ ಎನ್ನುವುದು ನಮ್ಮ ನಿಲುವಲ್ಲ,ನಾವು ಶಾಂತಿಯ ಪರವಾಗಿದ್ದೇವೆ ಎನ್ನುವುದು ನಮ್ಮ ನಿಲುವು ಆಗಿದೆ ’ಎಂದು ಲಿಖಿತ ಹೇಳಿಕೆಯಲ್ಲಿ ತಿಳಿಸಿದ ಸಚಿವರು,ಫೆಬ್ರವರಿ 2022ರಿಂದೀಚಿಗೆ ಉಕ್ರೇನ್ನಿಂದ 22,500 ಭಾರತೀಯ ಪ್ರಜೆಗಳು ಮತ್ತು 18 ದೇಶಗಳಿಗೆ ಸೇರಿದ 147 ವಿದೇಶಿ ಪ್ರಜೆಗಳನ್ನು ಸುರಕ್ಷಿತವಾಗಿ ವಾಪಸ್ ಕರೆತರಲು ಸರಕಾರಕ್ಕೆ ಸಾಧ್ಯವಾಗಿದೆ ಎಂದರು.
ಕೇರಳ ಕಾಂಗ್ರೆಸ್ ಸಂಸದ ಜೋಸ್ ಕೆ.ಮಣಿ ಅವರ ಪ್ರಶ್ನೆಗೆ ನೀಡಲಾದ ಲಿಖಿತ ಉತ್ತರವು,ಉಕ್ರೇನ್ ಸಂಘರ್ಷದ ಕುರಿತು ಭಾರತದ ನಿಲುವು ಸ್ಥಿರವಾಗಿದೆ ಎಂದು ಒತ್ತಿ ಹೇಳಿದೆ. ಹದಗೆಡುತ್ತಿರುವ ಸ್ಥಿತಿಯ ಬಗ್ಗೆ ತೀವ್ರ ಕಳವಳವನ್ನು ವ್ಯಕ್ತಪಡಿಸಿರುವ ಭಾರತವು,ಹಿಂಸಾಚಾರವನ್ನು ತಕ್ಷಣ ನಿಲ್ಲಿಸುವಂತೆ ಮತ್ತು ಎಲ್ಲ ಹಗೆತನಗಳನ್ನು ಕೊನೆಗೊಳಿಸುವಂತೆ ಕರೆ ನೀಡಿದೆ.
ರಶ್ಯದ ಆಕ್ರಮಣದ ವಿರುದ್ಧ ಕ್ವಾಡ್ ದೇಶಗಳಲ್ಲಿ ಭಾರತದ ನಿಲುವು ‘ಕೊಂಚ ಅಸ್ಥಿರ ’ ಎಂಬ ಅಮೆರಿಕದ ಬಣ್ಣನೆ ಮತ್ತು ಭಾರತ-ಅಮೆರಿಕ ವ್ಯಾಪಾರದ ಮೇಲೆ ಅದರ ಸಂಭವನೀಯ ಪರಿಣಾಮಗಳ ಕುರಿತು ಮಣಿಯವರ ಪೂರಕ ಪ್ರಶ್ನೆಗೆ ಉತ್ತರಿಸಿದ ಜೈಶಂಕರ್,ಉಕ್ರೇನ್ ಸಂಘರ್ಷವನ್ನು ವ್ಯಾಪಾರ ವಿಷಯಗಳೊಂದಿಗೆ ತಳುಕು ಹಾಕುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.







