VIDEO- ನನಗೀಗ 75 ವರ್ಷ ವಯಸ್ಸು, ನೀನು 60 ಅಂದ್ರೆ ಪರವಾಗಿಲ್ಲ: ಸದನದಲ್ಲಿ ಸಿದ್ದರಾಮಯ್ಯರ ಸ್ವಾರಸ್ಯಕರ ಚರ್ಚೆ

ಬೆಂಗಳೂರು, ಮಾ. 24: ‘ನನಗೀಗ ಎಪ್ಪತ್ತೈದು ವರ್ಷ ಆಗಿದೆ ಎಂದರೆ ನೀವು ನನ್ನನ್ನು ಮುದುಕರಾಗಿದ್ದೀರಿ ಎಂದು ಹೇಳೋಕೆ ಶುರು ಮಾಡ್ತೀರಿ. ಹೀಗಾಗಿ ನಾನು ನನ್ನ ವಯಸ್ಸು ಗೊತ್ತಾಗಬಾರದು ಎಂದೇ ನಾನು ವಾರಕೊಮ್ಮೆ ಸೇವಿಂಗ್ ಮಾಡಿಸ್ತೀನಿ' ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದು ಸದನದಲ್ಲಿ ಕೆಲಕಾಲ ಸ್ವಾರಸ್ಯಕರ ಚರ್ಚೆಗೆ ಕಾರಣವಾಯಿತು.
ಗುರುವಾರ ವಿಧಾನಸಭೆಯಲ್ಲಿ ನಿಯಮ 69ರ ಮೇರೆಗೆ ಸಾರ್ವಜನಿಕ ಮಹತ್ವದ ಜರೂರು ವಿಷಯದ ಮೇಲಿನ ಅಲ್ಪಾವಧಿ ಚರ್ಚೆಯಲ್ಲಿ ‘ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ' ವಿಚಾರ ಪ್ರಸ್ತಾಪದ ವೇಳೆ ಸಚಿವ ಕೆ.ಎಸ್.ಈಶ್ವರಪ್ಪ, ‘ಏನ್ ಸಾರ್ ಚೆನ್ನಾಗಿ ಕಾಣಿಸುತ್ತಿದ್ದೀರಿ' ಎಂದು ಪ್ರತಿಕ್ರಿಯಿಸಿದರು. ‘ವಾರಕ್ಕೆ ಒಂದು ಬಾರಿ ಶೇವಿಂಗ್ ಮಾಡಿಸಿಕೊಳ್ಳುತ್ತೇನೆ. ವಯಸ್ಸು ಗೊತ್ತಾಗಬಾರದಲ್ವಾ ಅದಕ್ಕೆ' ಎಂದು ಸಿದ್ದರಾಮಯ್ಯ ಉತ್ತರಿಸಿದರು.
‘ನನಗೀಗ 75 ವರ್ಷ ಆಗಿದೆ. ಆದರೆ, ನೀನು ಏನು ಮಾಡ್ತೀಯಾ? ಮುದುಕರಾಗಿದ್ದೀರಾ ಎಂದು ಹೇಳೋಕೆ ಶುರು ಮಾಡ್ತೀಯಾ' ಎಂದು ಸಿದ್ದರಾಮಯ್ಯ, ಈಶ್ವರಪ್ಪ ಕಾಲೆಳೆದರು. ಆಗ ಎದ್ದುನಿಂತ ಈಶ್ವರಪ್ಪ, ‘ಅನೇಕರು ತಾವು ಹುಟ್ಟುಹಬ್ಬದ ಶುಭ ಕೋರುವ ವೇಳೆ ವಯಸ್ಸು ಹಾಕುವುದಿಲ್ಲ. ನಿಮಗೆ ಎಪ್ಪತ್ತೈದು ವರ್ಷ ಆಗಿದೆ ಎಂದು ಯಾರು ಹೇಳುತ್ತಾರೆ? ಯಾರೂ ಹೇಳುವುದಿಲ್ಲ' ಎಂದು ಮಸಾಲೆ ಬೆರೆಸಿದರು.
ಬಳಿಕ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ‘ನಾನು ಹುಟ್ಟಿದ ನಿಖರವಾದ ದಿನಾಂಕ ನನಗೆ ಗೊತ್ತಿಲ್ಲ, ನನ್ನ ತಂದೆ-ತಾಯಿಯವರಿಗೂ ಈ ಬಗ್ಗೆ ಗೊತ್ತಿಲ್ಲ. ಏಕೆಂದರೆ ಅವರು ಇಬ್ಬರು ಹೆಬ್ಬೆಟ್ಟು. ನನ್ನನ್ನು ಐದನೆ ತರಗತಿಗೆ ನೇರವಾಗಿ ಸೇರಿಸಿದರು. ರಾಜಪ್ಪ ಎಂಬ ಹೆಡ್‍ಮೇಷ್ಟ್ರು ಇದ್ರು, ಅವರು ನನ್ನ ಹುಟ್ಟಿದ ದಿನ 1947 ಆಗಸ್ಟ್ 3 ಎಂದು ನಮೂದು ಮಾಡಿಕೊಂಡಿದ್ದಾರೆ. ಹೀಗಾಗಿ ಅದೇ ನನ್ನ ಹುಟ್ಟಿದ ದಿನ ಎಂದು ತಿಳಿದುಕೊಂಡಿದ್ದೇನೆ' ಎಂದು ಬಹಿರಂಗಪಡಿಸಿದರು.
‘ನಾನು ಯಾವತ್ತೂ ಹುಟ್ಟಿದ ಹಬ್ಬವನ್ನು ಆಚರಣೆ ಮಾಡುವುದಿಲ್ಲ, ಕಾರಣ ಯಾವಾಗ ಹುಟ್ಟಿದ್ದೇನೆಂದು ನನಗೆ ಗೊತ್ತಿಲ್ಲ. ಹೀಗಾಗಿ ಹುಟ್ಟಿದ ದಿನವನ್ನು ಬರೆದುಕೊಂಡಿರಲಿಲ್ಲ. ಶಾಲೆಯಲ್ಲಿ ಮೇಷ್ಟ್ರು ಬರೆದುಕೊಂಡ ಪ್ರಕಾರ ನನಗೆ ಎಪ್ಪತ್ತೈದು ವರ್ಷ ಎಂದು ಅಂದು ಕೊಂಡಿದ್ದೇನೆ. ಆದರೆ, ನೀನು 60 ವರ್ಷ ಎಂದರೆ ಪರವಾಗಿಲ್ಲ' ಎಂದು ಸಿದ್ದರಾಮಯ್ಯ, ಈಶ್ವರಪ್ಪ ಅವರನ್ನು ಛೇಡಿಸಿದರು.
ಆಯೋಗಕ್ಕೆ ಕೊಡಬೇಕು: ‘ಈ ವಯಸ್ಸಿನ ಸಂಶಯದ ಬಗ್ಗೆ ಯಾವುದಾದರೂ ಒಂದು ಆಯೋಗಕ್ಕೆ ವಹಿಸಿ ಪರಿಶೀಲನೆ ನಡೆಸಬೇಕು' ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಚಟಾಕಿ ಹಾರಿಸಿದ್ದು ಸದನದಲ್ಲಿ ನಲೆ ಅಲೆಯನ್ನು ಸೃಷ್ಟಿಸಿತು. ‘ನೀವು ಬಹಳ ಒಳ್ಳೆಯ ಕನ್ನಡ ವ್ಯಾಕರಣದ ಮೇಷ್ಟ್ರು ಇದ್ದಂತೆ' ಎಂದು ಸ್ಪೀಕರ್ ಹೇಳಿದರು.
ಆಗ ಎದ್ದುನಿಂತ ಕಾಂಗ್ರೆಸ್ ಸದಸ್ಯ ಕೃಷ್ಣ ಬೈರೇಗೌಡ, ‘ವ್ಯಾಕರಣ, ಶುದ್ಧ ಕನ್ನಡ ಬಳಕೆ ಸಂಬಂಧಿಸಿದಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ಬಹಳ ಪ್ರಬುದ್ಧತೆ ಇದೆ. ನೀವು ಅವರಿಗೆ ಒಂದು ಗಂಟೆಯಲ್ಲ, ದಿನಗಟ್ಟಲೇ ಮಾತನಾಡಬಲ್ಲರು. ಅವರನ್ನು ಶಾಲೆಗಳಿಗೆ ಕಳುಹಿಸಿದರೆ ಅಲ್ಲಿನ ಮಕ್ಕಳಿಗೆ ವ್ಯಾಕರಣದ ಬಗ್ಗೆ ಪ್ರಶ್ನೆ ಕೇಳುತ್ತಾರೆ' ಎಂದರು.
ಇದಕ್ಕೆ ಧ್ವನಿಗೂಡಿಸಿದ ಬಿಜೆಪಿಯ ಕುಮಾರಬಂಗಾರಪ್ಪ, ‘ಸಿದ್ದರಾಮಯ್ಯನವರಲ್ಲಿ ಪ್ರಬುದ್ಧತೆ ಇದೆ. ಹಾಗೆಂದು ಅವರನ್ನು ಶಾಲೆಗೆ ಕಳುಹಿಸುವುದು ಬೇಡ. ಅವರ ಅಪಾರ ಅನುಭವ ಮತ್ತು ಹಿರಿತನ, ಪ್ರಬುದ್ಧತೆ ನಮ್ಮ ಈ ಸದನಕ್ಕೆ ಅವರ ಅಗತ್ಯತೆ ಇದೆ ಎಂದರು. ‘ಈ ಹಿಂದೆ ನಮಗೆ ಹೈಸ್ಕೂಲ್‍ನಲ್ಲಿ ಕನ್ನಡ ಹೇಳಿಕೊಡುವ ಪಂಡಿತರಿದ್ದರು. ಕನ್ನಡ ವ್ಯಾಕರಣ, ಸಂಧಿ, ಸಮಾಸಗಳನ್ನ ಹೇಳಿಕೊಡುತ್ತಿದ್ದರು. ಆಗ ಕಲಿತಿದ್ದು, ಈಗಲೂ ಉಳಿದುಕೊಂಡಿದೆ. ಹೈಸ್ಕೂಲ್‍ವರೆಗಿನ ಓದು ನೆನಪಿನಲ್ಲಿ ಉಳಿಯುತ್ತದೆ. ಅನಂತರ ಕಾಲೇಜಿನ ಓದು ಮನಸ್ಸಿನಲ್ಲಿ ಉಳಿಯುವುದಿಲ್ಲ. ನನಗೆ ವ್ಯಾಕರಣ ಹೇಳಿಕೊಟ್ಟವರು ಈಶ್ವರಾಚಾರಿ ಮೇಷ್ಟ್ರು, ನೀನಲ್ಲ ಈಶ್ವರಪ್ಪ' ಎಂದು ಸಿದ್ದರಾಮಯ್ಯ ಹೇಳಿದರು. ಆ ಬಳಿಕ ಸಿದ್ದರಾಮಯ್ಯ ಆ ವಿಷಯವನ್ನು ಅಲ್ಲಿಗೆ ನಿಲ್ಲಿಸಿ ಕಾನೂನು ಸುವ್ಯವಸ್ಥೆ ವಿಚಾರದ ಬಗ್ಗೆ ಮಾತು ಮುಂದುವರಿಸಿದರು.







