ಗಣ್ಯರ ಭದ್ರತಾ ಗೌಪ್ಯತೆ ಬಹಿರಂಗವಿಲ್ಲ: ಸಚಿವ ಆರಗ ಜ್ಞಾನೇಂದ್ರ

ಬೆಂಗಳೂರು, ಮಾ.24: ಗಣ್ಯರು ಮತ್ತು ಅತಿಗಣ್ಯರಿಗಾಗಿ ವಿವಿಧ ಭದ್ರತಾ ಶ್ರೇಣಿಗಳನ್ನು ಸುರಕ್ಷತೆ ಹಾಗೂ ಗೌಪ್ಯತೆಯ ದೃಷ್ಟಿಯಿಂದ ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಗುರುವಾರ ವಿಧಾನ ಪರಿಷತ್ತಿನ ಕಲಾಪದಲ್ಲಿ ಆರ್.ಬಿ.ತಿಮ್ಮಾಪುರ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಅತಿಗಣ್ಯ ವ್ಯಕ್ತಿಗಳಿಗೆ ವಿಶೇಷ ಭದ್ರತಾ ಕೈಪಿಡಿಯನ್ನು ಕೇಂದ್ರ ಗೃಹ ಮಂತ್ರಾಲಯ ಬಿಡುಗಡೆ ಮಾಡಿದೆ. ಗಣ್ಯ ವ್ಯಕ್ತಿಗಳಿಗೆ ಸ್ಥಾನ ಆಧಾರಿತ ಮತ್ತು ಜೀವ ಬೆದರಿಕೆಯ ಮೇಲೆ ಭದ್ರತಾ ಶ್ರೇಣಿ ನೀಡಲಾಗುತ್ತಿದೆ ಎಂದು ವಿವರಿಸಿದರು.
ಇದೇ ವೇಳೆ ಮಧ್ಯೆ ಪ್ರವೇಶಿಸಿದ ಬಿಜೆಪಿಯ ಆಯನೂರು ಮಂಜುನಾಥ್, ಶಾಸಕರಿಗೆ ಯಾವ ಆಧಾರದ ಮೇಲೆ ಭದ್ರತೆ ನೀಡುತ್ತೀರಿ, ಅವರಿಗೆ ಜೀವ ಭಯವಿದೆ ಎನ್ನುವ ಕಾರಣಕ್ಕಾಗಿ ಅಥವಾ ರಾಜಕೀಯ ಶೋಭೆಗಾಗಿಯೇ ಎಂದು ಗೃಹ ಸಚಿವರನ್ನು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಆರಗ ಜ್ಞಾನೇಂದ್ರ, ಜೀವ ಭಯ ಇದೆ ಎಂದು ಲಿಖಿತವಾಗಿ ಪತ್ರ ನೀಡಿದವರಿಗೆ ಭದ್ರತೆ ನೀಡಲಾಗುತ್ತಿದೆ ಎಂದು ನುಡಿದರು.
ಬಳಿಕವೂ ಆಯನೂರು ಮಂಜುನಾಥ್, ರಾಜ್ಯದಲ್ಲಿ 200ಕ್ಕೂ ಹೆಚ್ಚು ಶಾಸಕರಿಗೆ ಭದ್ರತೆ ಒದಗಿಸಲಾಗಿದೆ. ಅವರಿಗೆ ಯಾವ ಜೀವ ಭಯವಿದೆ. ಜೀವ ಭಯವಾಗುವ ಕೆಲಸವಾದರೂ ಏನು ಮಾಡಿದ್ದಾರೆ ಎನ್ನುವುದನ್ನು ಸದನಕ್ಕೆ ತಿಳಿಸಿ ಎಂದರು.
ಶಾಸಕರು ಜನರ ಮಧ್ಯೆ ಇರುತ್ತಾರೆ. ಹೀಗಾಗಿ ಅವರಿಗೆ ಭದ್ರತೆ ನೀಡಲಾಗಿದೆ ಎಂದು ಸಚಿವರು ಸಮಜಾಯಿಷಿ ನೀಡಿದರು.







