ಉಡುಪಿ ಜಿಲ್ಲೆಯಾದ್ಯಂತ ಮಳೆ: ಅಲ್ಲಲ್ಲಿ ಮನೆಗಳಿಗೆ ಹಾನಿ
ಉಡುಪಿ, ಮಾ.24: ಬುಧವಾರ ಮಧ್ಯರಾತ್ರಿಯ ಬಳಿಕ ಜಿಲ್ಲೆಯಾದ್ಯಂತ ಗುಡುಗು ಸಿಡಿಲು, ಗಾಳಿಯೊಂದಿಗೆ ಸುರಿದ ಮಳೆಯಿಂದ ಹಲವು ಮನೆಗಳಿಗೆ ಹಾನಿಯಾದ ಬಗ್ಗೆ ವರದಿಗಳು ಬಂದಿದೆ. ಜಿಲೆಯಲ್ಲಿ 19.7ಮಿ.ಮೀ. ಮಳೆ ಸುರಿದಿದೆ.
ಹೆಬ್ರಿ ತಾಲೂಕು ಶಿವಪುರ ಗ್ರಾಮದ ಸುಂದರ ಹೆಗ್ಡೆ ಎಂಬವರ ಮನೆ ಗಾಳಿ- ಮಳೆಯಿಂದ ತೀವ್ರವಾಗಿ ಹಾನಿಗೊಂಡಿದ್ದು 3.5 ಲಕ್ಷ ರೂ.ಗಳಿಗೂ ಅಧಿಕ ನಷ್ಟ ಸಂಭವಿಸಿರುವ ಬಗ್ಗೆ ವರದಿಗಳು ಬಂದಿದೆ. ಅದೇ ರೀತಿ ಕುಂದಾಪುರ ತಾಲೂಕು ಅಂಪಾರು ಗ್ರಾಮದ ಮಹಾಬಲ ಆಚಾರಿ ಎಂಬವರ ಮನೆಗೆ 25,000ರೂ. ಹಾಗೂ ಅದೇ ಗ್ರಾಮದ ಬೋಜು ನಾಯ್ಕ ಎಂಬವರ ಮನೆಯ ಗೋಡೆ ಬಿರುಕು ಬಿಟ್ಟು 45,000ರೂ. ಹಾನಿ ಉಂಟಾಗಿರುವ ಬಗ್ಗೆ ಮಾಹಿತಿ ಲಭಿಸಿದೆ.
ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಜಿಲೆಯಲ್ಲಿ 19.7ಮಿ.ಮೀ ಮಳೆ ಸುರಿದಿದೆ. ಕುಂದಾಪುರ ತಾಲೂಕಿನಲ್ಲಿ ಅತ್ಯಧಿಕ 36ಮಿ.ಮೀ. ಬೈಂದೂರು ತಾಲೂಕಿನಲ್ಲಿ 22.8ಮಿ.ಮೀ. ಮಳೆಯಾಗಿದೆ. ಉಳಿದಂತೆ ಉಡುಪಿಯಲ್ಲಿ 16.2, ಹೆಬ್ರಿಯಲ್ಲಿ 16.0ಮಿ.ಮೀ., ಬ್ರಹ್ಮಾವರದಲ್ಲಿ 14.1, ಕಾರ್ಕಳ-9.0 ಹಾಗೂ ಕಾಪು ತಾಲೂಕಿನಲಿ 3.2ಮಿ.ಮೀ. ಮಳೆ ಬಿದ್ದಿದೆ.
ಭಾರೀ ಮಳೆ ಮುನ್ಸೂಚನೆ: ಮುಂದಿನ 48 ಗಂಟೆಗಳಲ್ಲಿ ಕರಾವಳಿ ಜಿಲ್ಲೆಯ ಅಲ್ಲಲ್ಲಿ ಸಾಧಾರಣದಿಂದ ಭಾರೀ ಮಳೆ ಸುರಿಯುವುದಾಗಿ ಭಾರತ ಹವಾಮಾನ ವಿಭಾಗ ಮುನ್ನೆಚ್ಚರಿಕೆ ನೀಡಿದೆ. ಮಾ.24 ಮತ್ತು 25ರಂದು ಕರಾವಳಿಯ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಅಲ್ಲಲ್ಲಿ ಗುಡುಗು-ಸಿಡಿಲಿನಿಂದ ಕೂಡಿದ ಭಾರೀ ಮಳೆ ಸುರಿಯುವ ಸಂಭವವಿದೆ. ಕೆಲವು 65ಮಿ.ಮೀ. ಮಳೆ ಬೀಳಬಹುದು ಎಂದು ಹವಾಮಾನ ವರದಿ ತಿಳಿಸಿದೆ.