VIDEO- 'ಮುಂದೊಂದು ದಿನ ನೀವು ನಮ್ಮ ಆರೆಸೆಸ್ಸ್ ಎಂದು ಹೇಳಬೇಕಾಗುತ್ತೆ': ಸ್ಪೀಕರ್ ಹೇಳಿಕೆಗೆ ಕಾಂಗ್ರೆಸ್ ಆಕ್ಷೇಪ

ಬೆಂಗಳೂರು, ಮಾ. 24: ‘ಸ್ಪೀಕರ್ ಪೀಠದಲ್ಲಿ ಕೂತು ನೀವು ನಮ್ಮ ಆರೆಸೆಸ್ಸ್ ಎಂದು ಹೇಳುವುದು ಒಳ್ಳೆಯದಲ್ಲ' ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಮಾತಿಗೆ ಕಾಂಗ್ರೆಸ್‍ನ ಬಿ.ಝಡ್.ಝಮೀರ್ ಅಹ್ಮದ್ ಖಾನ್ ಆಕ್ಷೇಪಿಸಿದ್ದು, ಕೆಲಕಾಲ ಆಡಳಿತ-ಪ್ರತಿಪಕ್ಷ ಸದಸ್ಯರ ನಡುವೆ ಗದ್ಧಲ, ಆರೋಪ-ಪ್ರತ್ಯಾರೋಪಕ್ಕೂ ಕಾರಣವಾಯಿತು.
ಗುರುವಾರ ವಿಧಾನಸಭೆಯಲ್ಲಿ ನಿಯಮ 69ರಡಿಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ‘ಕಾನೂನು ಸುವ್ಯವಸ್ಥೆ' ವಿಚಾರ ಪ್ರಸ್ತಾಪಿಸುತ್ತಿದ್ದ ವೇಳೆ, ಸಚಿವ ಆರ್.ಅಶೋಕ್ ಬಗ್ಗೆ ನನಗೆ ಒಳ್ಳೆಯ ಅಭಿಪ್ರಾಯವಿದೆ. ಆದರೆ, ಅವರದ್ದು ಮತ್ತು ನಮ್ಮದು ರಾಜಕೀಯ ಬೇರೆ. ಅವರು ಆರೆಸೆಸ್ಸ್' ಎಂದು ಉಲ್ಲೇಖಿಸಿದರು. ಈ ವೇಳೆ ಸಚಿವ ಅಶೋಕ್ ಹಾಗೂ ಸ್ಪೀಕರ್ ಕಾಗೇರಿ ಒಟ್ಟಾಗಿ, ‘ನೀವು ಏಕೆ ಪದೇ ಪದೇ ನಮ್ಮ ಆರೆಸೆಸ್ಸ್ ಬಗ್ಗೆ ಅಷ್ಟು ಬೇಸರ ಮಾಡಿಕೊಳ್ಳುತ್ತೀರಿ' ಎಂದು ಪ್ರಶ್ನಿಸಿದರು. ‘ನಾನೇನು ಬೇಸರ ಮಾಡಿಕೊಳ್ಳುವುದಿಲ್ಲ. ಆರೆಸೆಸ್ಸ್ ಎಂದರೆ ರಾಷ್ಟ್ರೀಯ ಸೇವಕ ಸಂಘ, ಅದನ್ನು ಹೇಳುವುದು ತಪ್ಪೇ? ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು. ಆಗ ಸ್ಪೀಕರ್, ‘ಅದು ರಾಷ್ಟ್ರೀಯ ಸ್ವಯಂ ಸೇವಕ ಸಂಘ. ಅದು ನಮ್ಮ ಆರೆಸೆಸ್ಸ್' ಎಂದು ಪ್ರತಿಕ್ರಿಯಿಸಿದರು.
ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್‍ನ ಝಮೀರ್ ಅಹ್ಮದ್ ಖಾನ್, ‘ನೀವು(ಸ್ಪೀಕರ್ ಕುರಿತು) ಪೀಠದಲ್ಲಿ ಕುಳಿತು ನಮ್ಮ ಆರೆಸೆಸ್ಸ್ ಎಂದು ಹೇಳ್ತಿದ್ದೀರಲ್ಲಾ' ಎಂದು ಖಾರವಾಗಿ ಪ್ರಶ್ನೆ ಮಾಡಿದರು. ‘ಇನ್ನೇನು ಮತ್ತೆ? ಅದು ನಮ್ಮ ಆರೆಸೆಸ್ಸ್. ಇನ್ನೂ ಒಂದು ಹೇಳ್ತಿನಿ ಕೇಳಿ, ಒಂದಲ್ಲ ಒಂದು ದಿನ ನೀವೂ ನಮ್ಮ ಆರೆಸೆಸ್ಸ್ ಎಂದು ಹೇಳಬೇಕಾಗುತ್ತದೆ' ಎಂದು ಸ್ಪೀಕರ್ ಉತ್ತರಿಸಿದರು.
ಈ ವೇಳೆ ಒಮ್ಮೆಗೆ ಎದ್ದುನಿಂತ ಕಾಂಗ್ರೆಸ್‍ನ ಝಮೀರ್ ಅಹ್ಮದ್, ಅಜಯ್ ಧರ್ಮಸಿಂಗ್, ಪ್ರಿಯಾಂಕ್ ಖರ್ಗೆ, ಯು.ಟಿ.ಖಾದರ್ ಸೇರಿದಂತೆ ಇನ್ನಿತರರ ಸದಸ್ಯರು, ‘ನಮ್ಮ ಆರೆಸೆಸ್ಸ್ ಆಗಲು ಎಂದಿಗೂ ಸಾಧ್ಯವೇ ಇಲ್ಲ' ಎಂದು ಧ್ವನಿ ಏರಿಸಿದರು. ಇದಕ್ಕೆ ಧ್ವನಿಗೂಡಿಸಿದ ಸಿದ್ದರಾಮಯ್ಯ, ‘ಆರೆಸೆಸ್ಸ್‍ನಿಂದ ದೇಶದಲ್ಲಿ ಮನುವಾದ ಬರುತ್ತದೆ. ಅದಕ್ಕಾಗಿ ನಾವು ಆರೆಸೆಸ್ಸ್ ವಿರೋಧ ಮಾಡುತ್ತೇವೆ' ಎಂದು ಹೇಳಿದರು.
ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಸಚಿವ ಅಶೋಕ್, ‘ಸ್ಪೀಕರ್ ಅವರೇ ನೀವು ಹೇಳಿದ್ದಕ್ಕೆ ನನ್ನ ಸಹಮತ ಇದೆ. ಈಗ ಆರೆಸೆಸ್ಸ್ ಸರ್ವವ್ಯಾಪಿ ಆಗಿಹೋಗಿದೆ. ಈ ದೇಶದ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಆರೆಸೆಸ್ಸ್' ಎಂದು ಸಮರ್ಥನೆ ನೀಡಲು ಮುಂದಾದರು. ‘ಇದು ಅತ್ಯಂತ ದುರಾದೃಷ್ಟ' ಎಂದ ಕಾಂಗ್ರೆಸ್‍ನ ರಾಮಲಿಂಗಾರೆಡ್ಡಿ ಮಾತಿಗೆ ಉತ್ತರಿಸಿದ ಅಶೋಕ್, ‘ದುರಾದೃಷ್ಟ ಅಲ್ಲ, ಅದೃಷ್ಟ' ಎಂದು ಹೇಳಿದರು.
‘ನೀವು ಬಿಜೆಪಿ ಎಂದು ಏಕೆ ಹೇಳ್ತೀರಾ, ಆರೆಸೆಸ್ಸ್ ಎಂದು ಹೇಳಿ. ನಿಮ್ಮ ರಾಜಕೀಯ ಪಕ್ಷದ ಹೆಸರನ್ನು ಬಿಜೆಪಿ ತೆಗೆದು ಆರೆಸೆಸ್ಸ್ ಎಂದು ಬದಲಾವಣೆ ಮಾಡಿಕೊಳ್ಳಿ' ಎಂದು ಝಮೀರ್ ಅಹ್ಮದ್ ಖಾನ್, ಅಶೋಕ್ ಕಾಲೆಳೆದರು. ಈ ಹಂತದಲ್ಲಿ ಎದ್ದು ನಿಂತ ಸಚಿವ ಈಶ್ವರಪ್ಪ, ‘ಒಂದು ದಿನ ಈ ದೇಶದ ಎಲ್ಲ್ಲ ಮುಸ್ಲಿಮರು, ಕ್ರೈಸ್ತರು ಆರೆಸೆಸ್ಸ್ ಸೇರುತ್ತಾರೆ. ಇದರಲ್ಲಿ ಯಾವುದೇ ಅನುಮಾನ ಇಲ್ಲ' ಎಂದು ಹೇಳಿದರು. ಕೂಡಲೇ ಎದ್ದು ನಿಂತ ಕಾಂಗ್ರೆಸ್ ಸದಸ್ಯ ಕೆ.ಜೆ.ಜಾರ್ಜ್, ಅದು ಎಂದಿಗೂ ಆಗುವುದಿಲ್ಲ, ಸಾಧ್ಯವೇ ಇಲ್ಲ, ಅಲ್ಲಿವರೆಗೆ ನೀವೇ ಇರುವುದಿಲ್ಲ' ಎಂದು ಪ್ರತಿಕ್ರಿಯೆ ನೀಡಿದರು.
ಈ ಗದ್ದಲದ ಮಧ್ಯೆ ಎದ್ದುನಿಂತ ಪ್ರಿಯಾಂಕ್ ಖರ್ಗೆ, ‘ಇದೇ ಪೀಠದಲ್ಲಿ ಕುಳಿತು ತಾವು ಸಂವಿಧಾನದ ಬಗ್ಗೆ ಉತ್ತಮ ಚರ್ಚೆ ಮಾಡಿದ್ದೇವೆಂದು ನೀವೇ(ಸ್ಪೀಕರ್) ಹೇಳಿದ್ದೀರಿ. ಇದೇ ಆರೆಸೆಸ್ಸ್‍ನವರು ದಿಲ್ಲಿಯ ರಾಮಲೀಲಾ ಮೈದಾನದಲ್ಲಿ 150 ಬಾರಿ ಪ್ರತಿಭಟನೆ ಮಾಡಿ ನಮ್ಮ ಸಂವಿಧಾನ ದಹನ ಮಾಡಿದ್ದಾರೆ' ಎಂದು ತಿರುಗೇಟು ನೀಡಿದರು. ಇದರಿಂದ ಸದನದಲ್ಲಿ ಕೋಲಾಹಲ ಸೃಷ್ಟಿಯಾಯಿತು. ಮಧ್ಯಪ್ರವೇಶಿಸಿದ ಸ್ಪೀಕರ್ ಕಾಗೇರಿ, ‘ಪ್ರಿಯಾಂಕ್ ಖರ್ಗೆ ಅವರೇನೀವು ಎಲ್ಲಿಂದ ಎಲ್ಲೆಲ್ಲೋ ಹೋಗ್ತಿದ್ದೀರಿ. ಸುಮ್ ಸುಮ್ಮನೇ ಏನೇನೋ ಮಾತಾಡಬಾರದು, ನಿಮ್ಮ ರಾಜಕೀಯವಿದ್ದರೆ ಹೊರಗೆ ಮಾತನಾಡಿಕೊಳ್ಳಿ' ಎಂದು ಸದನವನ್ನು ಮಧ್ಯಾಹ್ನದ ಭೋಜನ ವಿರಾಮಕ್ಕೆ ಮುಂದೂಡಿದರು.
ಈಶ್ವರಪ್ಪ-ಝಮೀರ್ ಜಂಗಿ ಕುಸ್ತಿ
‘ಶಿವಮೊಗ್ಗದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುವ ಸಂದರ್ಭದಲ್ಲಿ ಮೆರವಣಿಗೆ ಮಾಡುವ ಮೂಲಕ ರಾಜ್ಯಕ್ಕೆ ಬೆಂಕಿ ಹಚ್ಚಿದ್ದ ಈಶ್ವರಪ್ಪನವರಿಗೆ ಮಾತನಾಡುವ ನೈತಿಕತೆ ಇಲ್ಲ' ಎಂದು ಕಾಂಗ್ರೆಸ್ ಸದಸ್ಯ ಬಿ.ಝಡ್.ಝಮೀರ್ ಅಹ್ಮದ್ ಖಾನ್ ಆರೋಪಿಸಿದ್ದು ಸದನದಲ್ಲಿ ಕೆಲಕಾಲ ಕೋಲಾಹಲಕ್ಕೆ ಕಾರಣವಾಯಿತು. ಇದಕ್ಕೆ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ‘ಇಡೀ ರಾಜ್ಯಕ್ಕೆ ಬೆಂಕಿ ಹಚ್ಚಿದವನು ನೀನು..' ಎಂದು ಝಮೀರ್ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
‘ನಿನಗೇನು ಗೊತ್ತು ಕೂತುಕೊಳ್ಳೋ' ಎಂದು ಈಶ್ವರಪ್ಪ, ಝಮೀರ್ ವಿರುದ್ಧ ಏಕವಚನದಲ್ಲೇ ಕಿಡಿಕಾರಿದರು. ಇದಕ್ಕೆ ಆಕ್ಷೇಪಿಸಿದ ಕಾಂಗ್ರೆಸ್ ಸದಸ್ಯರು, ‘ಬೆಂಕಿ ಹಚ್ಚುವವರು ಪದವನ್ನು ಕಡತದಿಂದ ತೆಗೆದುಹಾಕಬೇಕು' ಎಂದು ಒತ್ತಾಯ ಮಾಡಿದರು. ಈಶ್ವರಪ್ಪ ಮಾತಿಗೆ ತಿರುಗೇಟು ನೀಡಿದ ಝಮೀರ್ ಅಹ್ಮದ್, ‘ಶಿವಮೊಗ್ಗದಲ್ಲಿ ನಿಷೇಧಾಜ್ಞೆ ಉಲ್ಲಂಘನೆ ಮಾಡಿದ್ದಾರೆ. ಮಂತ್ರಿಯಾಗಿ ಅವರಿಗೆ ಮಾತನಾಡಲು ನೈತಿಕ ಹಕ್ಕಿಲ್ಲ' ಎಂದು ವಾಗ್ದಾಳಿ ನಡೆಸಿದ್ದು ಉಭಯರ ಮಧ್ಯೆ ಜಟಾಪಟಿಗೂ ಕಾರಣವಾಯಿತು. ಆಗ ಎದ್ದುನಿಂದ ವಿಪಕ್ಷ ನಾಯಕ ಸಿದ್ದರಾಮಯ್ಯ, ‘ಬೆಂಕಿ ಹಚ್ಚುತ್ತಾರೆ' ಎಂದು ಈಶ್ವರಪ್ಪ ಜಮೀರ್‍ಗೆ ಹೇಳಿದ್ದಾರೆ. ಆ ಪದವನ್ನು ಕಡತದಿಂದ ತೆಗೆದು ಹಾಕಬೇಕು' ಎಂದು ಆಗ್ರಹಿಸಿದರು.







