ಕ್ಷಯರೋಗ ಮುಕ್ತ ಭಾರತಕ್ಕೆ ಎಲ್ಲರ ಸಹಕಾರ ಅಗತ್ಯ: ಸುಮಿತ್ರಾ ನಾಯಕ್
ಮಲ್ಪೆಯಲ್ಲಿ ವಿಶ್ವ ಕ್ಷಯ ರೋಗ ದಿನಾಚರಣೆ

ಉಡುಪಿ, ಮಾ.24: ಕ್ಷಯರೋಗಿಗಳನ್ನು ಶೀಘ್ರದಲ್ಲಿ ಪತ್ತೆ ಹಚ್ಚಿ, ಅವರಿಗೆ ಸೂಕ್ತ ಚಿಕಿತ್ಸೆ ದೊರಕಿಸುವ ಮೂಲಕ ಭಾರತವನ್ನು ಕ್ಷಯರೋಗ ಮುಕ್ತಗೊಳಿಸಲು ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದು ಉಡುಪಿ ನಗರಸಭೆಯ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್ ಹೇಳಿದ್ದಾರೆ.
ಗುರುವಾರ ಸಂಜೆ ಮಲ್ಪೆ ಬೀಚ್‌ನಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿಗಳ ಕಚೇರಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಮಲ್ಪೆ ಇವುಗಳ ಸಹಯೋಗದಲ್ಲಿ ಆಯೋಜಿಸಲಾದ ವಿಶ್ವ ಕ್ಷಯರೋಗ ದಿನಾಚರಣೆ ಕಾರ್ಯಕ್ರಮನ್ನು ಉದ್ಘಾಟಿಸಿ ಮಾತನಾಡುತಿದ್ದರು.
ಹಿಂದೆಲ್ಲಾ ಕ್ಷಯರೋಗ ಎಂದರೆ ಅಂಟು ರೋಗ ಎಂಬ ಭಾವನೆ ಇದ್ದು, ಕ್ಷಯರೋಗಿಗಳನ್ನು ಕುಟುಂಬದಿಂದ ಪ್ರತ್ಯೇಕವಾಗಿ ಇಡಲಾಗುತ್ತಿತ್ತು. ಆದರೆ ಇಂದು ಕ್ಷಯರೋಗವನ್ನು ನಿರಂತರ ಚಿಕಿತ್ಸೆಯಿಂದ ಸಂಪೂರ್ಣವಾಗಿ ಗುಣ ಪಡಿಸಲು ಸಾಧ್ಯವಿದ್ದು, ಎಲ್ಲಾ ಸರಕಾರಿ ಆಸ್ಪತೆಗಳಲ್ಲಿ ಉಚಿತ ಚಿಕಿತ್ಸೆ ಕೂಡಾ ಲಭ್ಯವಿದೆ ಎಂದವರು ನುಡಿದರು.
ಇಂದು ಅನೇಕ ಮಂದಿ ಕ್ಷಯರೋಗಿಗಳು ಸಂಪೂರ್ಣ ಗುಣಮುಖರಾಗಿ ಸ್ವಸ್ಥ ಜೀವನ ನಡೆಸುತ್ತಿದ್ದಾರೆ. ರೋಗಿಗಳಿಗೆ ಪೌಷ್ಠಿಕ ಆಹಾರ ಸೇವನೆಯ ಜೊತೆಗೆ ಕುಟುಂಬದವರ ಸಾಂತ್ವನ ಮತ್ತು ಸಹಕಾ ಕೂಡಾ ತೀರಾ ಅಗತ್ಯವಿದೆ ಎಂದರು.
ವಿಶ್ವದಲ್ಲಿ ಪ್ರತಿ 3 ಗಂಟೆಗೆ ಒಬ್ಬ ಕ್ಷಯರೋಗಿಯ ಸಾವು ಆಗುತ್ತಿದ್ದು, ಇದರಲ್ಲಿ ಭಾರತದ ಕೊಡುಗೆ ಶೇ.26ರಷ್ಟಿದೆ ಎಂದ ಅವರು 2025ರೊಳಗೆ ವಿಶ್ವವನ್ನು ಕ್ಷಯರೋಗದಿಂದ ಮುಕ್ತಗೊಳಿಸಲು ಪ್ರತಿಯೊಬ್ಬರೂ ಸಹಕಾರ ನೀಡಬೇಕು. ಈ ರೋಗದ ಕುರಿತಂತೆ ಸಾರ್ವಜನಿಕರಿಗೆ ಹೆಚ್ಚಿನ ಜಾಗೃತಿ ಮತ್ತು ಅರಿವು ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಸಲಹೆ ನೀಡಿದರು.
ನಗರಸಭೆಯ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಾಗರತ್ನ, ಆಹಾರ ಸುರಕ್ಷಾ ಅಂಕಿತ ಅಧಿಕಾರಿ ಡಾ. ಪ್ರೇಮಾನಂದ್, ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲೆಯಲ್ಲಿ ಕ್ಷಯರೋಗ ನಿಯಂತ್ರಣ ಕಾರ್ಯದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ ವೈದ್ಯರು, ಸಿಬ್ಬಂದಿಗಳು ಮತ್ತು ಆಶಾ ಕಾರ್ಯಕರ್ತೆಯರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕ್ಷಯರೋಗದ ಕುರಿತು ಜನಜಾಗೃತಿ ಮೂಡಿಸಲು ಮರಳು ಶಿಲ್ಪ ರಚನೆ, ಗಾಳಿಪಟ ಪ್ರದರ್ಶನ, ಯಕ್ಷಗಾನ ಮತ್ತು ಬೀದಿ ನಾಟಕ ಕಾರ್ಯಕ್ರಮಗನ್ನು ಸಹ ಇಲ್ಲಿ ಆಯೋಜಿಸಲಾಗಿತ್ತು.
ಜಿಲ್ಲಾ ಮಲೇರಿಯ ಅಧಿಕಾರಿ ಡಾ.ಪ್ರಶಾಂತ್ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುರೇಶ್ ಸ್ವಾಗತಿಸಿ ಮಂಜುನಾಥ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
