ರಶ್ಯ ಸೆಂಟ್ರಲ್ ಬ್ಯಾಂಕ್ ಗವರ್ನರ್ ರಾಜೀನಾಮೆ ಪ್ರಸ್ತಾವಕ್ಕೆ ಪುಟಿನ್ ನಕಾರ

ಮಾಸ್ಕೊ, ಮಾ.24: ಉಕ್ರೇನ್ ಮೇಲೆ ಆಕ್ರಮಣ ನಡೆಸುವಂತೆ ರಶ್ಯ ಅಧ್ಯಕ್ಷ ಪುಟಿನ್ ಆದೇಶಿಸಿದ ಬಳಿಕ ಅಲ್ಲಿನ ಸೆಂಟ್ರಲ್ ಬ್ಯಾಂಕ್ ಗವರ್ನರ್ ಪದತ್ಯಾಗದ ಪ್ರಸ್ತಾವ ಮುಂದಿರಿಸಿದ್ದರು. ಆದರೆ ಅದನ್ನು ಪುಟಿನ್ ತಿರಸ್ಕರಿಸಿದ್ದರು ಎಂದು ಮೂಲಗಳು ಹೇಳಿವೆ.
ಸೆಂಟ್ರಲ್ ಬ್ಯಾಂಕ್ ಗವರ್ನರ್ ಎಲ್ವಿರಾ ನಬ್ಯುಲಿನಾ ಅವರನ್ನು ಕಳೆದ ವಾರ ಮತ್ತೊಂದು ಅವಧಿಗೆ(5 ವರ್ಷ ಅವಧಿ) ಹುದ್ದೆಯಲ್ಲಿ ಮುಂದುವರಿಸಿ ಪುಟಿನ್ ಆದೇಶ ಜಾರಿಗೊಳಿಸಿದ್ದಾರೆ. ಯುದ್ಧದ ಹಿನ್ನೆಲೆಯಲ್ಲಿ ರಶ್ಯದ ವಿರುದ್ಧ ಜಾರಿಗೊಂಡಿರುವ ನಿರ್ಬಂಧದಿಂದ ಉದ್ಭವಿಸಿರುವ ಪರಿಸ್ಥಿತಿಯನ್ನು ಸೂಕ್ತವಾಗಿ ನಿರ್ವಹಿಸುವ ಹೆಚ್ಚುವರಿ ಜವಾಬ್ದಾರಿ ಈಗ ನಬ್ಯುಲಿನಾ ಮೇಲಿದೆ. 9 ವರ್ಷದಿಂದ ಗವರ್ನರ್ ಹುದ್ದೆಯಲ್ಲಿರುವ ಅವರು ಈ ಸೂಕ್ಷ್ಮ ಪರಿಸ್ಥಿತಿಯಲ್ಲಿ ನಿರ್ಗಮಿಸುವುದು ದ್ರೋಹ ಬಗೆದಂತಾಗುತ್ತದೆ ಎಂದು ಸರಕಾರದ ಕೆಲವು ಅಧಿಕಾರಿಗಳು ಪ್ರತಿಕ್ರಿಯಿಸಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ.
ದೀರ್ಘಾವಧಿಯಿಂದ ರಶ್ಯದ ಪ್ರಮುಖ ಆರ್ಥಿಕ ಸುಧಾರಕರಾಗಿ ಪುಟಿನ್ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಅನಾಟೊಲಿ ಚುಬಾಯಸ್ ಕಳೆದ ವಾರ ಉಕ್ರೇನ್ ಮೇಲಿನ ರಶ್ಯದ ಆಕ್ರಮಣವನ್ನು ಖಂಡಿಸಿ ಹುದ್ದೆಗೆ ರಾಜೀನಾಮೆ ನೀಡಿ ದೇಶ ತೊರೆದು ಹೋಗಿದ್ದಾರೆ. ಈ ಮಧ್ಯೆ ಬ್ಯಾಂಕ್ ಬಡ್ಡಿದರವನ್ನು ದುಪ್ಪಟ್ಟಿಗೂ ಹೆಚ್ಚಿನ ಮಟ್ಟಕ್ಕೆ ಏರಿಸಿರುವ ಸೆಂಟ್ರಲ್ ಬ್ಯಾಂಕ್, ಬಂಡವಾಳ ಹಿಂದೆಗೆತದ ಮೇಲೆ ನಿಷೇಧ ಹೇರುವ ಮೂಲಕ ಅರ್ಥವ್ಯವಸ್ಥೆಯ ಮೇಲಿನ ಆಘಾತವನ್ನು ಕಡಿಮೆಗೊಳಿಸಲು ಪ್ರಯತ್ನಿಸಿದೆ. ಅಮೆರಿಕ, ಯುರೋಪಿಯನ್ ಯೂನಿಯನ್ ಸಹಿತ ಅಂತರಾಷ್ಟ್ರೀಯ ನಿರ್ಬಂಧದಿಂದಾಗಿ ರಶ್ಯದ ಕರೆನ್ಸಿ ರೂಬಲ್ಸ್ ತೀವ್ರ ಅಪಮೌಲ್ಯಗೊಂಡಿದೆ. ಸದ್ಯದ ಮಟ್ಟಿಗೆ ಜನತೆ ಆಘಾತದ ಸರಮಾಲೆಗೆ ಸಿದ್ಧರಾಗಬೇಕಿದೆ ಎಂದು ರಶ್ಯ ಸೆಂಟ್ರಲ್ ಬ್ಯಾಂಕ್ ಮಾಜಿ ಅಧಿಕಾರಿ ಒಲೆಗ್ ವ್ಯೆಜಿನ್ ಹೇಳಿದ್ದಾರೆ.







