ಕೋವಿಡ್ ಸೋಂಕಿನಿಂದ ಸಾವು ಪರಿಹಾರಕ್ಕೆ ನಕಲಿ ಅರ್ಜಿ: ತನಿಖೆ ನಡೆಸಲು ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್ ಅನುಮತಿ

ಹೊಸದಿಲ್ಲಿ, ಮಾ. 24: ಕೋವಿಡ್ ಸೋಂಕಿನಿಂದ ಪ್ರಾಣ ಕಳೆದುಕೊಂಡವರ ಕುಟುಂಬದ ಸದಸ್ಯರಿಗೆ ಮೀಸಲಾದ ಪರಿಹಾರಕ್ಕಾಗಿ ನಕಲಿ ಅರ್ಜಿ ಸಲ್ಲಿಸಿರುವ ಬಗ್ಗೆ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಗುರುವಾರ ಕೇಂದ್ರ ಸರಕಾರಕ್ಕೆ ಅನುಮತಿ ನೀಡಿದೆ.
ಕೊರೋನ ಸೋಂಕಿನಿಂದ ಸಾವನ್ನಪ್ಪಿದವರ ದಾಖಲೆ ಹಾಗೂ ಅರ್ಜಿಯ ಸಂಖ್ಯೆಯ ನಡುವೆ ದೊಡ್ಡ ಅಂತರ ಇರುವ ಮಹಾರಾಷ್ಟ್ರ, ಕೇರಳ, ಗುಜರಾತ್ ಹಾಗೂ ಆಂಧ್ರಪ್ರದೇಶಗಳಲ್ಲಿ ಶೇ. 5 ಅರ್ಜಿಯನ್ನು ಪರಿಶೀಲಿಸಬಹುದು ಎಂದು ನ್ಯಾಯಮೂರ್ತಿಗಳಾದ ಎಂ.ಆರ್. ಶಾ ಹಾಗೂ ಬಿ.ವಿ. ನಾಗರತ್ನ ಅವರನ್ನು ಒಳಗೊಂಡ ಪೀಠ ಕೇಂದ್ರ ಸರಕಾರಕ್ಕೆ ತಿಳಿಸಿದೆ. ಪ್ರಸ್ತುತ ಪರಿಹಾರಕ್ಕೆ ಅರ್ಜಿ ಸಲ್ಲಿಸುವ ಎಲ್ಲ ಇಂತಹ ವ್ಯಕ್ತಿಗಳಿಗೆ 60 ದಿನಗಳ ಕಾಲಾವಧಿ ಹಾಗೂ ಭವಿಷ್ಯದಲ್ಲಿ ಅರ್ಜಿ ಸಲ್ಲಿಸುವವರಿಗೆ 90 ದಿನಗಳ ಕಾಲಾವಧಿಯನ್ನು ಸುಪ್ರೀಂ ಕೋರ್ಟ್ ನಿಗದಿಪಡಿಸಿತ್ತು.
ಕೋವಿಡ್ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಕುಟುಂಬದವರು ಪರಿಹಾರ ನೀಡುವಂತೆ ಅರ್ಜಿ ಸಲ್ಲಿಸಲು ನಾಲ್ಕು ವಾರಗಳ ಗಡು ವಿಧಿಸುವಂತೆ ಕೋರಿ ಈ ಹಿಂದೆ ಕೇಂದ್ರ ಸರಕಾರ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು. ಕೋವಿಡ್ನಿಂದ ಪ್ರಾಣ ಕಳೆದುಕೊಂಡವರ ಕುಟುಂಬದ ಸದಸ್ಯರಿಗಾಗಿ ಮೀಸಲಾದ 50 ಸಾವಿರ ರೂಪಾಯಿ ಪರಿಹಾರ ಪಡೆಯಲು ನಕಲಿ ಅರ್ಜಿ ಸಲ್ಲಿಸುವ ಬಗ್ಗೆ ಈ ಹಿಂದೆ ಕಳವಳ ವ್ಯಕ್ತಪಡಿಸಿದ್ದ ನ್ಯಾಯಾಲಯ, ಇದನ್ನು ದುರುಪಯೋಗ ಮಾಡಬಹುದು ಎಂದು ಎಂದಿಗೂ ಚಿಂತಿಸಿರಲಿಲ್ಲ ಅಥವಾ ನೈತಿಕತೆ ಇಷ್ಟು ಕೆಳಮಟ್ಟಕ್ಕೆ ಇಳಿಯುತ್ತದೆ ಎಂದು ಭಾವಿಸಿರಲಿಲ್ಲ ಎಂದಿತು.
ಪರಿಹಾರ ಪಾವತಿಸಲು ಅನುಕೂಲವಾಗುವಂತೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ (ಎಸ್ಎಲ್ಎಸ್ಎ) ಸದಸ್ಯ ಕಾರ್ಯದರ್ಶಿಯೊಂದಿಗೆ ಬದ್ದ ನೋಡಲ್ ಅಧಿಕಾರಿಯನ್ನು ನಿಯೋಜಿಸುವಂತೆ ಎಲ್ಲ ರಾಜ್ಯ ಸರಕಾರ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು.







