ಉಡುಪಿ: ಮತ್ತೆ ಜಿಲ್ಲೆಯ ಮೂವರಲ್ಲಿ ಕೋವಿಡ್ ಸೋಂಕು ಪತ್ತೆ

ಸಾಂದರ್ಭಿಕ ಚಿತ್ರ (PTI)
ಉಡುಪಿ, ಮಾ.23: ಉಡುಪಿ ತಾಲೂಕಿನ ಒಬ್ಬ ಪುರುಷ ಹಾಗೂ ಇಬ್ಬರು ಮಹಿಳೆಯರು ಸೇರಿದಂತೆ ಒಟ್ಟು ಮೂವರಿಗೆ ಇಂದು ಕೋವಿಡ್-19 ಸೋಂಕು ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ ಮತ್ತೆ ಎರಡಂಕಿಗೆ (10) ಏರಿದೆ.
ದಿನದಲ್ಲಿ ಒಟ್ಟು 414 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿತ್ತು. ಉಡುಪಿ ತಾಲೂಕಿನ 300 ಮಂದಿಯಲ್ಲಿ ಮೂವರು ಪಾಸಿಟಿವ್ ಬಂದಿದ್ದರೆ, ಕುಂದಾಪುರದ 56 ಹಾಗೂ ಕಾರ್ಕಳ ತಾಲೂಕಿನ 58 ಮಂದಿಯಲ್ಲಿ ಯಾರೂ ಸೋಂಕಿತರು ಪತ್ತೆಯಾಗಿಲ್ಲ.
ಜ.1ರ ನಂತರ ಕೊರೋನಕ್ಕೆ ಪಾಸಿಟಿವ್ ಬಂದವರ ಸಂಖ್ಯೆ 18,432 ಆದರೆ, ಚೇತರಿಸಿ ಕೊಂಡವರ ಸಂಖ್ಯೆ 18489 ಆಗಿದೆ.
778 ಮಕ್ಕಳಿಗೆ ಲಸಿಕೆ: ಜಿಲ್ಲೆಯಲ್ಲಿ ಇಂದು 12ರಿಂದ 14ವರ್ಷದೊಳಗಿನ ಒಟ್ಟು 778 ಮಕ್ಕಳಿಗೆ ಕೋವಿಡ್ನ ಮೊದಲ ಡೋಸ್ ಲಸಿಕೆಯನ್ನು ನೀಡಲಾ ಗಿದ್ದು, ಈ ಮೂಲಕ ಜಿಲ್ಲೆಯಲ್ಲಿ ಈವರೆಗೆ ಒಟ್ಟು 15,267 ಮಕ್ಕಳು ಈ ಲಸಿಕೆಯನ್ನು ಪಡೆದಂತಾಗಿದೆ.
ಅಲ್ಲದೇ ದಿನದಲ್ಲಿ ಒಟ್ಟು 4395 ಮಂದಿ ಇಂದು ಲಸಿಕೆಯನ್ನು ಪಡೆದು ಕೊಂಡಿದ್ದಾರೆ. 60 ವರ್ಷ ಮೇಲಿನ 328 ಮಂದಿ ಹಿರಿಯ ನಾಗರಿಕರು ಸೇರಿದಂತೆ ಒಟ್ಟು 343 ಮಂದಿ ಮುನ್ನೆಚ್ಚರಿಕೆಯ ಒಂದು ಡೋಸ್ ಲಸಿಕೆ ಪಡೆದರೆ, ಒಟ್ಟು 876 ಮಂದಿ ಮೊದಲ ಡೋಸ್ ಹಾಗೂ 3176 ಮಂದಿ ಎರಡನೇ ಡೋಸ್ ಲಸಿಕೆಯನ್ನು ಪಡೆದುಕೊಂಡಿದ್ದಾರೆ.