ಸಕ್ಷಮ ನ್ಯಾಯಾಲಯದಿಂದ ಆದೇಶ ಬರುವವರೆಗೆ ಕವಿ ವರವರರಾವ್ ಬಂಧನ ಇಲ್ಲ: ಹೈಕೋರ್ಟ್ ಗೆ ಸರಕಾರದ ಹೇಳಿಕೆ

ವರವರರಾವ್
ಬೆಂಗಳೂರು, ಮಾ.24: ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ವೆಂಕಟಮ್ಮನಹಳ್ಳಿಯಲ್ಲಿ ಕೆಎಸ್ಆರ್ಪಿ ತುಕಡಿಯ ಮೇಲಿನ ದಾಳಿ ಪ್ರಕರಣದ ವಿಚಾರಣೆಗೆ ಹಾಜರಾಗುವುದಕ್ಕಾಗಿ ಆಂಧ್ರದ ಖ್ಯಾತಕವಿ ಹಾಗೂ ಮಾನವ ಹಕ್ಕುಗಳ ಹೋರಾಟಗಾರ ವರವರರಾವ್ ಅವರ ಜಾಮೀನು ಷರತ್ತಿನಲ್ಲಿ ಸಡಿಲಿಕೆ ಮಾಡುವಂತೆ ಬಾಂಬೆ ಹೈಕೋರ್ಟ್ ಅಥವಾ ಎನ್ಐಎ ನ್ಯಾಯಾಲಯದ ಮುಂದೆ ಸೂಕ್ತ ಮನವಿ ಸಲ್ಲಿಸಲಾಗುವುದು. ಸಕ್ಷಮ ನ್ಯಾಯಾಲಯದಿಂದ ಆದೇಶ ಬರುವವರೆಗೆ ವರವರರಾವ್ ಅವರನ್ನು ಬಂಧಿಸುವುದಿಲ್ಲ ಎಂದು ಹೈಕೋರ್ಟ್ಗೆ ರಾಜ್ಯ ಸರಕಾರ ತಿಳಿಸಿದೆ.
ರಾವ್ ಅವರ ವಿರುದ್ಧ ಜಾಮೀನು ರಹಿತ ವಾರೆಂಟ್ ಆದೇಶ ಮಾಡಿದ್ದ ಮಧುಗಿರಿಯ 4ನೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ನ ಆದೇಶ ವಜಾ ಮಾಡುವಂತೆ ಮನವಿ ಸಲ್ಲಿಸಿದ್ದ ವರವರರಾವ್ ಅವರ ಅರ್ಜಿಯನ್ನು ಹೈಕೋರ್ಟ್ ಏಕ ಸದಸ್ಯ ನ್ಯಾಯಪೀಠ ಇತ್ಯರ್ಥಪಡಿಸಿದೆ.
ಸರಕಾರಿ ಪರ ವಕೀಲರು ವಾದಿಸಿ, ವರವರರಾವ್ ಅವರು ಮುಂಬೈನಲ್ಲಿರುವ ಎನ್ಐಎ ದಾಖಲಿಸಿರುವ ಪ್ರಕರಣಗಳ ವಿಚಾರಣೆಗೆ ಸ್ಥಾಪಿಸಲಾಗಿರುವ ವಿಶೇಷ ನ್ಯಾಯಾಲಯದ ವ್ಯಾಪ್ತಿ ಬಿಟ್ಟು ತೆರಳುವಂತಿಲ್ಲ ಎಂದು ಜಾಮೀನು ಷರತ್ತು ವಿಧಿಸಿರುವುದರಲ್ಲಿ ಸಡಲಿಕೆ ಕೋರಿ ಬಾಂಬೆ ಹೈಕೋರ್ಟ್ ಅಥವಾ ಎನ್ಐಎ ನ್ಯಾಯಾಲಯದ ಮುಂದೆ ಸೂಕ್ತ ಮನವಿ ಸಲ್ಲಿಸಲಾಗುವುದು. ಈ ಕುರಿತು ಸಂಬಂಧಪಟ್ಟ ನ್ಯಾಯಾಲಯದಿಂದ ಆದೇಶ ಬರುವವರೆಗೆ ವರವರರಾವ್ ಅವರನ್ನು ಬಂಧಿಸುವುದಿಲ್ಲ ಪೀಠಕ್ಕೆ ತಿಳಿಸಿದರು.
ಇದಕ್ಕೆ ವರವರರಾವ್ ಪರ ವಕೀಲರು, ಸರಕಾರವು ಮೇಲಿನ ನಿರ್ಧಾರ ಕೈಗೊಂಡಿರುವುದರಿಂದ ಮನವಿಯ ಹೆಚ್ಚಿನ ಪರಿಗಣನೆ ಅವಶ್ಯವಿಲ್ಲ ಎಂದು ಪೀಠಕ್ಕೆ ತಿಳಿಸಿದರು. ಇದನ್ನು ದಾಖಲಿಸಿಕೊಂಡಿರುವ ಪೀಠವು ಅರ್ಜಿ ವಿಲೇವಾರಿ ಮಾಡಿತು.







