ಕಮ್ಯುನಿಸ್ಟ್ ಚಳುವಳಿಯ ಎಕೆಜಿ ಸಂಸ್ಮರಣಾ ದಿನಾಚರಣೆ

ಮಂಗಳೂರು, ಮಾ.24: ಕಮ್ಯುನಿಸ್ಟ್ ಚಳುವಳಿಯ ನಾಯಕರಾಗಿದ್ದ ಎ.ಕೆ.ಗೋಪಾಲನ್‌ರ 45ನೇ ಸಂಸ್ಮರಣಾ ದಿನಾಚರಣೆಯು ನಗರದ ವಿಕಾಸ ಕಚೇರಿಯಲ್ಲಿ ನಡೆಯಿತು.
ಈ ಸಂದರ್ಭ ನಿವೃತ್ತ ಪ್ರಾಧ್ಯಾಪಕ ಬಾಲಕೃಷ್ಣ ಶೆಟ್ಟಿಗಾರ್ ಮಾತನಾಡಿ ದೇಶದ ಪ್ರಥಮ ಚುನಾವಣೆಯಲ್ಲಿ ಸ್ಪರ್ಧಿಸಿ ವಿಜಯಿಯಾದ ಎಕೆಜಿ ಸಂಸತ್ತಿನಲ್ಲಿ ವಿರೋಧ ಪಕ್ಷದ ನಾಯಕರಾಗಿ ಜನಸಾಮಾನ್ಯರ ಬದುಕಿನ ಬವಣೆಗಳನ್ನು ವ್ಯಕ್ತಪಡಿಸುತ್ತಿದ್ದ ಗಟ್ಟಿ ದ್ವನಿಯಾಗಿದ್ದರು. ದೇಶದ ಯಾವುದೇ ಮೂಲೆಯಲ್ಲಿ ನಡೆಯುತ್ತಿದ್ದ ಜನತೆಯ ಹೋರಾಟಗಳಲ್ಲಿ ಭಾಗವಹಿಸಿ ಧೈರ್ಯ ತುಂಬುತ್ತಿದ್ದರು. ಜಾತಿ ವ್ಯವಸ್ಥೆಯ ವಿರುದ್ದ ಪ್ರಬಲ ಹೋರಾಟ ನಡೆಸಿ ಕೆಳವರ್ಗದ ಜನತೆಯ ಕಣ್ಮಣಿಯಾಗಿದ್ದರು. ದೇಶದ ಸ್ವಾತಂತ್ರ್ಯಕ್ಕಾಗಿ ಅವಿರತವಾಗಿ ಶ್ರಮಿಸಿದ್ದಲ್ಲದೆ ರೈತ ಕಾರ್ಮಿಕರ ಹೋರಾಟಗಳನ್ನು ಸ್ವಾತಂತ್ರ ಚಳುವಳಿಯೊಂದಿಗೆ ಬೆಸೆಯುವ ಮೂಲಕ ತನ್ನ ಜೀವನದುದ್ದಕ್ಕೂ ದಣಿವರಿಯದೆ ಜನನಾಯಕರಾಗಿ ಮೆರೆದು ಜನತೆಯ ಹ್ರೃದಯ ಗೆದ್ದಿದ್ದರು ಎಂದರು.
ಎಸ್‌ಎಫ್‌ಐ ಸ್ಥಾಪಕ ಸದಸ್ಯ ಚಂದ್ರಹಾಸ ಜೆ. ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪ್ರಗತಿಪರ ಚಿಂತಕ ಡಾ.ಕೃಷ್ಣಪ್ಪ ಕೊಂಚಾಡಿ ಮಾತನಾಡಿದರು. ಸುನೀಲ್ ಕುಮಾರ್ ಬಜಾಲ್ ಸ್ವಾಗತಿಸಿದರು. ಅಶೋಕ್ ಸಾಲ್ಯಾನ್ ವಂದಿಸಿದರು.