ಕೇರಳ ವಿಮಾನ ನಿಲ್ದಾಣಕ್ಕೆ ಬಂದಿಳಿದ ಬೆನ್ನಲ್ಲೇ ಮಾನವಶಾಸ್ತ್ರಜ್ಞ ಫಿಲಿಪ್ಪೊ ಒಸೆಲಿಯಾ ಗಡಿಪಾರು
ತಿರುವನಂತಪುರ,ಮಾ.24: ನಗರದಲ್ಲಿ ಆಯೋಜಿಸಲಾಗಿರುವ ಸಮ್ಮೇಳನವೊಂದರಲ್ಲಿ ಪಾಲ್ಗೊಳ್ಳಲು ಗುರುವಾರ ಬೆಳಿಗ್ಗೆ ಬ್ರಿಟನ್‌ನಿಂದ ತಿರುವನಂತಪುರ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಖ್ಯಾತ ಮಾನವಶಾಸ್ತ್ರಜ್ಞ ಹಾಗೂ ಸಮಾಜಶಾಸ್ತ್ರಜ್ಞ ಫಿಲಿಪ್ಪೊ ಒಸೆಲಿಯಾ ಅವರನ್ನು ತಾಯ್ನಾಡಿಗೆ ಗಡಿಪಾರುಗೊಳಿಸಲಾಗಿದೆ. ಅವರ ಗಡಿಪಾರಿಗೆ ಯಾವುದೇ ಕಾರಣಗಳನ್ನು ಅಧಿಕಾರಿಗಳು ನೀಡಿಲ್ಲ.
ಕಳೆದ 30 ವರ್ಷಗಳಲ್ಲಿ ಕೇರಳದಲ್ಲಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಿವರ್ತನೆಗಳ ಕುರಿತು ವ್ಯಾಪಕ ಸಂಶೋಧನೆಗಳನ್ನು ನಡೆಸಿರುವ ಒಸೆಲಿಯಾ ಅವರನ್ನು ‘ಕೇರಳ ಕರಾವಳಿ ಸಮುದಾಯಗಳ ಜೀವನೋಪಾಯ ಮತ್ತು ಜೀವನಪ್ರಪಂಚಕ್ಕೆ ಸಂಬಂಧಿಸಿದಂತೆ ಉದಯೋನ್ಮುಖ ವಿಷಯಗಳು ’ಕುರಿತು ಶುಕ್ರವಾರ ತಿರುವನಂತಪುರದಲ್ಲಿ ಆಯೋಜಿಸಲಾಗಿರುವ ಸಮ್ಮೇಳನದ ಅಗ್ರ ಪ್ರತಿನಿಧಿಯನ್ನಾಗಿ ಪರಿಗಣಿಸಲಾಗಿತ್ತು.
ಒಸೆಲಿಯಾ ಗಡಿಪಾರು ಕುರಿತು ಪ್ರಶ್ನೆಗೆ ತಿರುವನಂತಪುರ ವಿಮಾನ ನಿಲ್ದಾಣದಲ್ಲಿಯ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಯ ವಲಸೆ ಅಧಿಕಾರಿಯೋರ್ವರು, ಗಡಿಪಾರಿಗೆ ಕಾರಣವನ್ನು ಬಹಿರಂಗಗೊಳಿಸುವಂತಿಲ್ಲ. ಮೇಲಿನ ಅಧಿಕಾರಿಗಳ ಆದೇಶದ ಮೇರೆಗೆ ಒಸೆಲಿಯಾರಿಗೆ ಪ್ರವೇಶವನ್ನು ನಿರಾಕರಿಸಲಾಗಿದೆ ಎಂದು ಉತ್ತರಿಸಿದರು.
ಗುರುವಾರ ಬೆಳಿಗ್ಗೆ ಎಮಿರೇಟ್ಸ್ ವಿಮಾನದ ಮೂಲಕ ತಾನು ತಿರುವನಂತಪುರ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಫ್ಲೈಟ್ ಅಸಿಸ್ಟಂಟ್‌ಗಳನ್ನು ಸಂಪರ್ಕಿಸುವಂತೆ ತನಗೆ ಸೂಚಿಸಲಾಗಿತ್ತು ಮತ್ತು ಬಳಿಕ ಹೊರಗಡೆ ತನಗಾಗಿ ಕಾಯುತ್ತಿದ್ದ ವ್ಯಕ್ತಿಯ ಬಳಿಗೆ ಕರೆದೊಯ್ಯಲಾಗಿತ್ತು ಎಂದು ತಿಳಿಸಿದ ಒಸೆಲಿಯಾ,ವಲಸೆ ಡೆಸ್ಕ್‌ನಲ್ಲಿ ತನ್ನನ್ನು ತಕ್ಷಣ ಗಡಿಪಾರುಗೊಳಿಸುವುದಾಗಿ ತಿಳಿಸಲಾಗಿತ್ತು. ದುಬಾಯಿ ಯಾನದ ಮೂಲಕ ತನ್ನ ಗಡಿಪಾರು ವ್ಯವಸ್ಥೆಗಾಗಿ ಎಮಿರೇಟ್ಸ್ ಸಿಬ್ಬಂದಿಯೋರ್ವರು ಅದಾಗಲೇ ಅಲ್ಲಿ ಉಪಸ್ಥಿತರಿದ್ದು,ನಿಜಕ್ಕೂ ತನ್ನ ಗಡಿಪಾರು ನಿರ್ಧಾರವನ್ನು ತನ್ನ ಆಗಮನದ ಮೊದಲೇ ತೆಗೆದುಕೊಳ್ಳಲಾಗಿತ್ತು ಎಂದರು. ತನ್ನ ಗಡಿಪಾರಿಗೆ ಯಾವುದೇ ಕಾರಣವನ್ನು ಅಧಿಕಾರಿಗಳು ನೀಡಲಿಲ್ಲ ಎಂದು ಹೇಳಿದರು.







