ಪಿಎಸ್ಎಲ್ವಿ ನಿರ್ಮಿಸಲು ಆಸಕ್ತರಾಗಿರುವ ಅದಾನಿ, ಎಲ್ ಆ್ಯಂಡ್ ಟಿ ಕಂಪೆನಿಗಳು: ಕೇಂದ್ರ ಸರಕಾರ

ಹೊಸದಿಲ್ಲಿ, ಮಾ. 24: ಧ್ರುವೀಯ ಉಪಗ್ರಹ ಉಡಾವಣಾ ವಾಹನ (ಪಿಎಸ್ಎಲ್ವಿ) ನಿರ್ಮಿಸಲು ಸರಕಾರಿ ಸ್ವಾಮ್ಯದ ಉದ್ಯಮದ ನೇತೃತ್ವದ ಎರಡು ಒಕ್ಕೂಟಗಳು ಆಸಕ್ತಿ ತೋರಿಸಿವೆ. ಅದಾನಿ ಎಂಟರ್ಪ್ರೈಸಸ್ ಹಾಗೂ ಎಲ್ ಆ್ಯಂಡ್ ಟಿ ಈ ಒಕ್ಕೂಟದಲ್ಲಿ ಸೇರಿವೆ ಎಂದು ಕೇಂದ್ರ ಸರಕಾರ ಗುರುವಾರ ಹೇಳಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ಕ್ಷೇತ್ರಗಳ ಭಾಗೀದಾರಿಕೆಯನ್ನು ಉತ್ತೇಜಿಸುವ ಪ್ರಯತ್ನವಾಗಿ ಬಾಹ್ಯಾಕಾಶ ಇಲಾಖೆಯ ಅಡಿಯಲ್ಲಿ ಇರುವ ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ (ಎನ್ಎಸ್ಐಎಲ್) ಐದು ಪಿಎಸ್ಎಲ್ವಿಗಳನ್ನು ನಿರ್ಮಿಸಲು ಭಾರತೀಯ ಉದ್ಯಮಗಳಿಂದ ಪ್ರಸ್ತಾವ ಆಹ್ವಾನಿಸಿದೆ.
ಎರಡು ಒಕ್ಕೂಟ ಇದೆ. ಒಂದು ಒಕ್ಕೂಟ ಹಿಂದೂಸ್ತಾನ್ ಏರೋನಾಟಿಕ್ ಲಿಮಿಟೆಡ್ ಹಾಗೂ ಲಾರ್ಸನ್ ಆ್ಯಂಡ್ ಟರ್ಬೋವನ್ನು ಒಳಗೊಂಡಿದೆ. ಇನ್ನೊಂದು ಒಕ್ಕೂಟ ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್), ಅದಾನಿ ಎಂಟರ್ಪ್ರೈಸಸ್ ಲಿಮಿಟೆಡ್ (ಎಇಎಲ್) ಹಾಗೂ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (ಬಿಇಎಂಎಲ್) ಅನ್ನು ಒಳಗೊಂಡಿದೆ. ಈ ಸಂಸ್ಥೆಗಳು ಪಿಎಸ್ಎಲ್ವಿ ನಿರ್ಮಾಣ ಮಾಡಲು ತಾಂತ್ರಿಕ-ವಾಣಿಜ್ಯ ಪ್ರಸ್ತಾವವನ್ನು ಸಲ್ಲಿಸಿವೆ ಎಂದು ಸಹಾಯಕ ಸಚಿವ ಜಿತೇಂದ್ರ ಸಿಂಗ್ ಅವರು ಹೇಳಿದ್ದಾರೆ. ಸರಕಾರಿ ಸ್ವಾಮಿತ್ವದ ಉದ್ಯಮ ಭಾರತ್ ಹೆವಿ ಇಲೆಕ್ಟ್ರಿಕಲ್ಸ್ ಲಿಮಿಟೆಡ್ ಕೂಡ ಪಿಎಸ್ಎಲ್ವಿ ನಿರ್ಮಾಣಕ್ಕೆ ತಾಂತ್ರಿಕ-ವಾಣಿಜ್ಯ ಪ್ರಸ್ತಾವವನ್ನು ಸಲ್ಲಿಸಿದೆ ಎಂದು ಅವರು ತಿಳಿಸಿದರು. ರಾಜ್ಯ ಸಭೆಯಲ್ಲಿ ಎನ್ಸಿಪಿಯ ಸದಸ್ಯ ವಂದನಾ ಚವ್ಹಾಣ್ ಅವರು ಕೇಳಿದ ಪ್ರಶ್ನೆಗೆ ಜಿತೇಂದ್ರ ಸಿಂಗ್ ಅವರು ಈ ಪ್ರತಿಕ್ರಿಯೆ ನೀಡಿದರು.







