ವಿವಾದಾತ್ಮಕ ರೈಲ್ವೆ ಯೋಜನೆ ವಿರುದ್ಧ ಜಾಥಾದಲ್ಲಿ ಕೇರಳ ಕಾಂಗ್ರೆಸ್ ಸದಸ್ಯರ ಮೇಲೆ ಹಲ್ಲೆ ಆರೋಪ
ಪೊಲೀಸರಿಂದ ನಿರಾಕರಣೆ

ಹೊಸದಿಲ್ಲಿ,ಮಾ.24: ಕೇರಳದ ಕಾಂಗ್ರೆಸ್ ಸದಸ್ಯರು ಗುರುವಾರ ಸಂಸತ್ತಿಗೆ ಜಾಥಾದಲ್ಲಿ ತೆರಳುವುದನ್ನು ಪೊಲೀಸರು ತಡೆಯುವುದರೊಂದಿಗೆ ಸಿಲ್ವರ್‌ಲೈನ್ ಸೆಮಿ-ಸ್ಪೀಡ್ ರೇಲ್ ಕಾರಿಡಾರ್ ಯೋಜನೆಯ ಕುರಿತು ಕೇರಳದಲ್ಲಿ ಉಂಟಾಗಿರುವ ರಾಜಕೀಯ ವಿವಾದವು ದಿಲ್ಲಿಯಲ್ಲಿ ಪ್ರತಿಧ್ವನಿಸಿದೆ. ಪೊಲೀಸರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದೂ ಕೆಲವು ನಾಯಕರು ಆರೋಪಿಸಿದ್ದಾರೆ.
ವಿಜಯ ಚೌಕ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಳಿಕ ಸಂಸತ್ತಿನತ್ತ ಜಾಥಾದಲ್ಲಿ ಸಾಗುತ್ತಿದ್ದ ಕೇರಳದ ಕಾಂಗ್ರೆಸ್ ಸಂಸದರನ್ನು ಪೊಲೀಸರು ತಡೆದಾಗ ವಾಗ್ವಾದ ಉಂಟಾಗಿತ್ತು. ಸಂಸದರನ್ನು ತಳ್ಳಲಾಗಿತ್ತು ಮತ್ತು ಕನಿಷ್ಠ ಓರ್ವ ಸಂಸದ,ಎರ್ನಾಕುಳಮ್ನ ಹಿಬೀ ಎಡೆನ್ ಅವರ ಮುಖಕ್ಕೆ ಪೆಟ್ಟು ಬಿದ್ದಿದೆ ಎನ್ನಲಾಗಿದೆ.
ಸಂಸದರ ಮೇಲೆ ಹಲ್ಲೆ ನಡೆಸಿರುವುದನ್ನು ಪೊಲೀಸರು ನಿರಾಕರಿಸಿದ್ದಾರೆ.
ಕೆಲವರು ಮಲಯಾಳಂ ಭಾಷೆಯಲ್ಲಿ ಕೂಗುತ್ತ ಮೀಡಿಯಾ ಲಾನ್‌ನಿಂದ ನಾರ್ಥ್ ಫೌಂಟೇನ್ ಬ್ಯಾರಿಕೇಡ್‌ಗಳ ತಾಣದತ್ತ ಬಂದಿದ್ದರು. ಪೊಲೀಸರು ಅವರನ್ನು ಬ್ಯಾರಿಕೇಡ್‌ಗಳ ಬಳಿ ತಡೆದು ನಿಲ್ಲಿಸಿದ್ದರು. ತಾವು ಸಂಸದರೆಂದು ಹೇಳಿಕೊಂಡ ಅವರು ಕೂಗುವುದನ್ನು ಮುಂದುವರಿಸಿದ್ದರು. ಗುರುತು ಚೀಟಿಗಳನ್ನು ತೋರಿಸಲೂ ಅವರು ನಿರಾಕರಿಸಿದ್ದರು. ಈ ನಡುವೆ ಸಂಸದರನ್ನು ಗುರುತಿಸಲು ಸಂಸತ್ತಿನ ಗೇಟ್ ನಂ.1ರಲ್ಲಿಯ ಭದ್ರತಾ ಸಿಬ್ಬಂದಿಗಳನ್ನು ಕರೆಸಲಾಗಿತ್ತು. ಅವರು ಬಂದು ಸಂಸದರನ್ನು ಗುರುತಿಸಿದ ಬಳಿಕ ಮುಂದಕ್ಕೆ ಸಾಗಲು ಅವಕಾಶ ನೀಡಲಾಗಿತ್ತು ಎಂದು ದಿಲ್ಲಿ ಪೊಲೀಸ್‌ನ ಸಾರ್ವಜನಿಕ ಸಂಪರ್ಕಾಧಿಕಾರಿ ಸುಮನ್ ನಲ್ವಾ ಸುದ್ದಿಗಾರರಿಗೆ ತಿಳಿಸಿದರು.
ಕೆ-ರೇಲ್ ಎಂದೇ ಕರೆಯಲಾಗುವ ಯೋಜನೆಯ ಕುರಿತು ಚರ್ಚಿಸಲು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದ ದಿನವೇ ಈ ಘಟನೆ ನಡೆದಿದೆ. ಕಾಂಗ್ರೆಸ್ ಕೇರಳದಲ್ಲಿ ಯೋಜನೆಯ ವಿರುದ್ಧ ಪ್ರತಿಭಟನೆಯನ್ನು ನಡೆಸುತ್ತಿದೆ.
ಲೋಕಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ಆರ್‌ಎಸ್‌ಪಿಯ ಎನ್.ಕೆ.ಪ್ರೇಮಚಂದ್ರನ್ ಮತ್ತು ಕಾಂಗ್ರೆಸ್‌ನ ಕೆ.ಸುರೇಶ ಸೇರಿದಂತೆ ಕೇರಳದ ಹಲವು ಸಂಸದರು ಪೊಲೀಸರ ವಿರುದ್ಧ ಕ್ರಮಕ್ಕಾಗಿ ಸ್ಪೀಕರ್ ಓಂ ಬಿರ್ಲಾ ಅವರನ್ನು ಆಗ್ರಹಿಸಿದರು.
ಘಟನೆಯ ವೀಡಿಯೊವನ್ನು ಟ್ವೀಟಿಸಿರುವ ರಾಜ್ಯಸಭಾ ಸದಸ್ಯ ಕೆ.ಸಿ ವೇಣುಗೋಪಾಲ ಅವರು,ಇದು ಸರಕಾರದ ಅಧಿಕಾರದ ದುರುಪಯೋಗವಾಗಿದೆ ಎಂದು ಬಣ್ಣಿಸಿದ್ದಾರೆ.







