ಒಬಿಸಿ ಸಂಘಗಳಿಂದ ಜಂಟಿ ಕ್ರಿಯಾ ಸಮಿತಿ ರಚನೆ
ಹೊಸದಿಲ್ಲಿ,ಮಾ.24: ಇತರ ಹಿಂದುಳಿದ ವರ್ಗ (ಒಬಿಸಿ)ಗಳಿಗೆ ಸಂಬಂಧಿಸಿದ ವಿಷಯಗಳಿಗೆ ಒತ್ತು ನೀಡಲು ಒಬಿಸಿ ಸಂಘಗಳು ಜಂಟಿ ಕ್ರಿಯಾ ಸಮಿತಿಯೊಂದನ್ನು ರಚಿಸಿಕೊಂಡಿವೆ.
ಅಖಿಲ ಭಾರತ ಒಬಿಸಿ ಉದ್ಯೋಗಿಗಳ ಒಕ್ಕೂಟದ ಆಶ್ರಯದಲ್ಲಿ ಇತ್ತೀಚಿಗೆ ದಿಲ್ಲಿಯಲ್ಲಿ ನಡೆದ ರಾಷ್ಟ್ರ/ರಾಜ್ಯ ಮಟ್ಟದ ಒಬಿಸಿ ಸಂಘಗಳ ಸಭೆಯಲ್ಲಿ ಸಮಿತಿ ರಚನೆಯ ಉಪಕ್ರಮವನ್ನು ಕೈಗೊಳ್ಳಲಾಯಿತು.
ಐದು ಗಂಟೆಗಳ ಸುದೀರ್ಘ ಕಾಲ ನಡೆದ ಸಭೆಯಲ್ಲಿ ಒಬಿಸಿಗಳ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಬೀರುವ ರಾಷ್ಟ್ರಮಟ್ಟದ ನೀತಿ ವಿಷಯಗಳ ಬಗ್ಗೆ ಚರ್ಚಿಸಲಾಯಿತು.
ಎಐಒಬಿಸಿ ಒಕ್ಕೂಟದ ಸಂಯೋಜಿತ ಘಟಕಗಳ ಪದಾಧಿಕಾರಿಗಳು, ರಾಷ್ಟ್ರೀಯ ಒಬಿಸಿ ಮಹಾಸಂಘ,ಎಐಒಬಿಸಿ ವಿದ್ಯಾರ್ಥಿ ಸಂಘ, ಸೇವಾ-ಬಿಹಾರ ಮತ್ತು ಉ.ಪ್ರದೇಶ,ಮೂಲನಿವಾಸಿಗಳ ಸಾಂವಿಧಾನಿಕ ಹಕ್ಕುಗಳಿಗಾಗಿ ವೇದಿಕೆ (ಎಫ್ಆರ್ಐಪಿ),ನ್ಯಾಷನಲ್ ಬಿಸಿ ಸಂಗಮ್, ಒಬಿಸಿ ಸೆಂಟ್ರಲ್ ಕಮಿಟಿ,ತೆಲಂಗಾಣ ಮತ್ತು ಆಂಧ್ರಪ್ರದೇಶ ಬಿಸಿ ಸಂಗಮ್,ಬಿಸಿ ಸ್ಟಡಿ ಫೋರಮ್ ತೆಲಂಗಾಣ,ನ್ಯಾಶನಲ್ ಒಬಿಸಿ ಫ್ರಂಟ್,ಆಂಧ್ರಪ್ರದೇಶ ಒಬಿಸಿ ಸಂಘಗಳ ನಾಯಕರು ಚರ್ಚೆಗಳಲ್ಲಿ ಪಾಲ್ಗೊಂಡಿದ್ದರು.
ಒಬಿಸಿಗಳಿಗಾಗಿ ಸಂಸದೀಯ ಸಮಿತಿಯ ಅಧ್ಯಕ್ಷ ರಾಜೇಶ ವರ್ಮಾ, ಸಂಸದ ಹಾಗೂ ಒಬಿಸಿ ಸಮಿತಿಯ ಸದಸ್ಯ ಟಿಕೆಎಸ್ ಇಳಂಗೋವನ್, ಸಾಮಾಜಿಕ ಕಾರ್ಯಕರ್ತ ಪ್ರೊ.ದಿಲೀಪ ಮಂಡಲ್,ವಕೀಲ ಶಶಾಂಕ ರತ್ನೂ ಮತ್ತು ಒಕ್ಕೂಟದ ಅಧ್ಯಕ್ಷ ಹಾಗೂ ಮಾಜಿ ಸಂಸದ ವಿ.ಹನುಮಂತ ರಾವ್ ಅವರು ಸಭೆಯಲ್ಲಿ ಮಾತನಾಡಿದರು.
ಸಾಮಾಜಿಕ ನ್ಯಾಯಕ್ಕಾಗಿ ಜಂಟಿ ಕ್ರಿಯಾ ಸಮಿತಿಯು ಮುಂಬರುವ ತಿಂಗಳುಗಳಲ್ಲಿ ರಾಜ್ಯಮಟ್ಟದಲ್ಲಿ ಕಾರ್ಯಕ್ರಮಗಳನ್ನು ಮತ್ತು 2022 ಜುಲೈ-ಆಗಸ್ಟ್ ವೇಳೆಗೆ ದಿಲ್ಲಿಯಲ್ಲಿ ಕೇಂದ್ರೀಕೃತ ಕಾರ್ಯಕ್ರಮವನ್ನು ನಡೆಸಲಿದೆ ಎಂದು ಎಐಒಬಿಸಿ ಉದ್ಯೋಗಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಜಿ.ಕರುಣಾನಿಧಿಯವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.







