ಮಾಜಿ ಮುಖ್ಯ ನ್ಯಾಯಮೂರ್ತಿ ರಮೇಶ್ ಚಂದ್ರ ಲಾಹೋಟಿ ನಿಧನ
ಹೊಸದಿಲ್ಲಿ, ಮಾ. 24: ಮಾಜಿ ಮುಖ್ಯ ನ್ಯಾಯಮೂರ್ತಿ (ಸಿಜೆಐ) ರಮೇಶ್ ಚಂದ್ರ ಲಾಹೋಟಿ ಅವರು ಬುಧವಾರ ದಿಲ್ಲಿಯ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು. ಲಾಹೋಟಿ ಅವರು 35ನೇ ಮುಖ್ಯ ನ್ಯಾಯಮೂರ್ತಿ.
ಅವರು 2004 ಜೂನ್ 1ರಂದು ನಿಯೋಜಿತರಾಗಿದ್ದರು. 2005 ನವೆಂಬರ್ 1ರ ವರೆಗೆ ಸೇವೆ ಸಲ್ಲಿಸಿದ್ದರು ಎಂದು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ತಿಳಿಸಿದೆ. ಲಾಹೋಟಿ ಅವರು 1940 ನವೆಂಬರ್ 1ರಂದು ಜನಿಸಿದರು. ಶಿಕ್ಷಣ ಪೂರೈಸಿದ ಬಳಿಕ ಅವರು ಮಧ್ಯಪ್ರದೇಶದ ಗುನಾ ಜಿಲ್ಲೆಯ ಬಾರ್ ಕೌನ್ಸಿಲ್ಗೆ 1960ರಲ್ಲಿ ಸೇರ್ಪಡೆಯಾಗಿದ್ದರು ಹಾಗೂ 1962ರಲ್ಲಿ ನ್ಯಾಯವಾದಿಯಾಗಿ ನೋಂದಾಯಿತರಾಗಿದ್ದರು.
1977 ಎಪ್ರಿಲ್ನಲ್ಲಿ ಅವರನ್ನು ಜಿಲ್ಲಾ ಹಾಗೂ ಸೆಷನ್ಸ್ನ ನ್ಯಾಯಾಲಯದ ನ್ಯಾಯಾಧೀಶರನ್ನಾಗಿ ನಿಯೋಜಿಸಲಾಗಿತ್ತು. ಒಂದು ವರ್ಷದ ಬಳಿಕ ಅವರು ರಾಜೀನಾಮೆ ನೀಡಿದ್ದರು. ಅನಂತರ ಅವರು ಮತ್ತೆ ಉಚ್ಚ ನ್ಯಾಯಾಲಯದ ನ್ಯಾಯವಾದಿಯಾಗಿ ಕಾರ್ಯ ನಿರ್ವಹಿಸಿದರು. 1988 ಮೇ 3ರಂದು ಅವರನ್ನು ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ಹೆಚ್ಚುವರಿ ನ್ಯಾಯಾಧೀಶರನ್ನಾಗಿ ನಿಯೋಜಿಸಲಾಗಿತ್ತು ಹಾಗೂ 1989 ಅಕ್ಟೋಬರ್ 4ರಂದು ಖಾಯಂ ನ್ಯಾಯಾಧೀಶರನ್ನಾಗಿ ಮಾಡಲಾಗಿತ್ತು. ಅನಂತರ ಅವರನ್ನು 1994 ಫೆಬ್ರವರಿ 7ರಂದು ದಿಲ್ಲಿ ಉಚ್ಚ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು.







