ಉದ್ಯಮಿ, ಅಲ್ ಪುರ್ಖಾನ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಮೊಹಿದ್ದೀನ್ ಕುಂಞಿ ನಿಧನ
ಮೂಡುಬಿದಿರೆ, ಮಾ.25: ಮತ್ಸ್ಯೋದ್ಯಮಿ, ಅಲ್ ಫುರ್ಖಾನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಜಿ ಎಂ. ಮೊಹಿದ್ದೀನ್ ಕುಂಞಿ ಉಳ್ಳಾಲ (78) ಇಂದು ಮುಂಜಾವ ಇಲ್ಲಿನ ಪುತ್ತಿಗೆಯಲ್ಲಿರುವ ತನ್ನ ಸ್ವಗೃಹದಲ್ಲಿ ನಿಧನರಾದರು.
ಮೃತರು, ಮೂವರು ಪುತ್ರರು ಮತ್ತು ನಾಲ್ಕು ಮಂದಿ ಪುತ್ರಿಯರು, ಪತ್ನಿ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಮೂಲತಃ ಉಳ್ಳಾಲದ ಪ್ರಸ್ತುತ ಮೂಡುಬಿದಿರೆ ಸಮೀಪದ ಪುತ್ತಿಗೆ ನಿವಾಸಿಯಾಗಿದ್ದ ಹಾಜಿ ಮೊಹಿದ್ದೀನ್ ಕುಂಞಿ ಉದ್ಯಮಿಯಾಗಿದ್ದರು. ಶಿಕ್ಷಣ ಪ್ರೇಮಿಯಾಗಿದ್ದ ಅವರು ಒಂದೇ ಕ್ಯಾಂಪಸ್‌ನಲ್ಲಿ ಧಾರ್ಮಿಕ ಮತ್ತು ಲೌಕಿಕ ಶಿಕ್ಷಣ ನೀಡುವ ಉದ್ದೇಶದಿಂದ ಅಲ್ ಪುರ್ಖಾನ್ ಶಿಕ್ಷಣ ಸಂಸ್ಥೆಯನ್ನು 17 ವರ್ಷದ ಹಿಂದೆ ಸ್ಥಾಪಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದ್ದಾರೆ.
ಸೌತ್ ಕರ್ನಾಟಕ ಸಲಫಿ ಮೂವ್‌ಮೆಂಟ್ ಸಂಘಟನೆಯ ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಸಂಘಟನೆಯನ್ನು ಮುನ್ನಡೆಸಿದ್ದ ಅವರು ಧಾರ್ಮಿಕ ಶ್ರದ್ಧೆಯ ವ್ಯಕ್ತಿತ್ವ ಹೊಂದಿದ್ದರು. ಪರೋಪಕಾರಿಯಾಗಿದ್ದ ಅವರು ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಅಂತಿಮ ದರ್ಶನಕ್ಕಾಗಿ ಮೃತದೇಹವನ್ನು ಪುತ್ತಿಗೆಯ ಅಲ್‌ಫುರ್ಖಾನ್ ಕ್ಯಾಂಪಸ್‌ನಲ್ಲಿಡಲಾಗಿದ್ದು, ಇಂದು ಬೆಳಗ್ಗೆ 9 ಗಂಟೆಗೆ ದಫನ ಕಾರ್ಯ ನೆರವೇರಿಸಲಾಗುವುದು ಕುಟುಂಬದ ಮೂಲಗಳು ತಿಳಿಸಿವೆ.