ಭಾರತದಲ್ಲಿ ಕ್ಷಯರೋಗ ಪ್ರಕರಣಗಳ ಸಂಖ್ಯೆ ಶೇ. 19ರಷ್ಟು ಏರಿಕೆ, ದಿಲ್ಲಿಯಲ್ಲಿ ಗರಿಷ್ಠ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ದೇಶದಲ್ಲಿ 2021ರಲ್ಲಿ ಕ್ಷಯರೋಗ ಪ್ರಕರಣಗಳ ಸಂಖ್ಯೆ 2020ಗೆ ಹೋಲಿಸಿದಾಗ ಶೇ. 19ರಷ್ಟು ಏರಿಕೆಯಾಗಿದೆ. 2019-2021ರ ನಡುವೆ ಸಮೀಕ್ಷೆಯ ಭಾಗವಾಗಿ ಸಂಪರ್ಕಿಸಲಾದ ಶೇ 64ರಷ್ಟು ಮಂದಿಗೆ ಕ್ಷಯರೋಗ ಲಕ್ಷಣಗಳಿದ್ದರೂ ಅವರು ಯಾವುದೇ ಚಿಕಿತ್ಸೆಯನ್ನು ಪಡೆದುಕೊಂಡಿರಲಿಲ್ಲ ಎಂದು ಇಂಡಿಯಾ ಟಿಬಿ ವರದಿ 2022 ಮತ್ತು ರಾಷ್ಟ್ರೀಯ ಟಿಬಿ ಸಮೀಕ್ಷೆ ತಿಳಿಸಿದೆ.
2021ರಲ್ಲಿ 19.3 ಲಕ್ಷ ಹೊಸ ಅಥವಾ ಟಿಬಿ ಮರುಕಳಿಸಿದ ಪ್ರಕರಣಗಳು ವರದಿಯಾಗಿವೆ, 2020ರಲ್ಲಿ ಈ ಸಂಖ್ಯೆ 16.3 ಲಕ್ಷ ಆಗಿತ್ತು ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಬಿಡುಗಡೆಗೊಳಿಸಿದ ವರದಿ ತಿಳಿಸಿದೆ.
ಎಚ್ಐವಿ ರೋಗಿಗಳನ್ನು ಹೊರತುಪಡಿಸಿ ಕ್ಷಯರೋಗದಿಂದ ಮೃತಪಟ್ಟವರ ಸಂಖ್ಯೆ 2021ರಲ್ಲಿ 4.9 ಲಕ್ಷ ಆಗಿದ್ದರೆ ಅದಕ್ಕಿಂತಲೂ ಹಿಂದಿನ ವರ್ಷಕ್ಕಿಂತ ಈ ಸಂಖ್ಯೆ ಶೇ 13ರಷ್ಟು ಹೆಚ್ಚಾಗಿದೆ. 2019-2020 ನಡುವೆ ಟಿಬಿಯಿಂದ ಮರಣ ಪ್ರಮಾಣ ಶೇ 11ರಷ್ಟು ಏರಿಕೆಯಾಗಿದೆ.
1955-58ರಲ್ಲಿ ನಡೆದ ಮೊದಲ ಸಮೀಕ್ಷೆಯ 60 ವರ್ಷಗಳ ನಂತರ ನಡೆಸಲಾದ ಎರಡನೇ ಟಿಬಿ ಸಮೀಕ್ಷೆ ಇದಾಗಿದ್ದು ಭಾರತದಲ್ಲಿ ಪ್ರತಿ 1 ಲಕ್ಷ ಜನಸಂಖ್ಯೆಗೆ 312 ಪ್ರಕರಣಗಳಿದ್ದರೆ ಜಾಗತಿಕವಾಗ ಪ್ರತಿ ಒಂದು ಲಕ್ಷ ಜನಸಂಖ್ಯೆಗೆ ಸರಾಸರಿ 127 ಪ್ರಕರಣಗಳು ಇವೆ.
ದಿಲ್ಲಿಯಲ್ಲಿ ತಲಾ 1 ಲಕ್ಷ ಜನಸಂಖ್ಯೆಗೆ 534 ಪ್ರಕರಣಗಳಿದ್ದು ಇದು ಗರಿಷ್ಠ ಪ್ರಮಾಣವಾಗಿದೆ, ರಾಜಸ್ಥಾನದಲ್ಲಿ ಪ್ರತಿ 1 ಲಕ್ಷ ಜನಸಂಖ್ಯೆಗೆ 484 ಟಿಬಿ ಪ್ರಕರಣಗಳು, ಉತ್ತರ ಪ್ರದೇಶದಲ್ಲಿ 481, ಹರ್ಯಾಣಾದಲ್ಲಿ 465 ಮತ್ತು ಛತ್ತೀಸಗಢದಲ್ಲಿ 454 ಪ್ರಕರಣಗಳಿವೆ.







