ಪಶ್ಚಿಮಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಒತ್ತಾಯಿಸಿದ ಬಿಜೆಪಿ ಸಂಸದೆ ರೂಪಾ ಗಂಗುಲಿ

Photo:ANI
ಹೊಸದಿಲ್ಲಿ: ಬಂಗಾಳದ ಬಿರ್ಭುಮ್ ಜಿಲ್ಲೆಯಲ್ಲಿ ಟಿಎಂಸಿ ಮುಖಂಡನ ಹತ್ಯೆ ಖಂಡಿಸಿ ಎಂಟು ಜನರನ್ನು ಸುಟ್ಟುಹಾಕಿದ ಘಟನೆಯ ಬಗ್ಗೆ ರಾಜ್ಯಸಭೆಯಲ್ಲಿ ಮಾತನಾಡಿದ ಬಿಜೆಪಿ ಸಂಸದೆ ರೂಪಾ ಗಂಗುಲಿ ರಾಜ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ರಾಜ್ಯವು "ಇನ್ನು ಬದುಕಲು ಯೋಗ್ಯವಾಗಿಲ್ಲ. ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕೆಂದು ಒತ್ತಾಯಿಸಿದರು.
"ನಾವು ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಒತ್ತಾಯಿಸುತ್ತೇವೆ. ಅಲ್ಲಿ ಸಾಮೂಹಿಕ ಹತ್ಯೆಗಳು ನಡೆಯುತ್ತಿವೆ. ಜನರು ಸ್ಥಳದಿಂದ ಪಲಾಯನ ಮಾಡುತ್ತಿದ್ದಾರೆ ... ರಾಜ್ಯವು ಇನ್ನು ಮುಂದೆ ಬದುಕಲು ಯೋಗ್ಯವಾಗಿಲ್ಲ" ಎಂದು ರೂಪಾ ಅವರ ಹೇಳಿಕೆಯನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.
ಕಲ್ಕತ್ತಾ ಹೈಕೋರ್ಟ್ ಶುಕ್ರವಾರ ಪ್ರಕರಣದ ತನಿಖೆಯನ್ನು ಕೇಂದ್ರೀಯ ತನಿಖಾ ಸಂಸ್ಥೆಗೆ ವರ್ಗಾಯಿಸಿದೆ.
ಮಂಗಳವಾರ ಗುಂಪೊಂದು ಬಂಗಾಳದ ಬಿರ್ಭುಮ್ ಜಿಲ್ಲೆಯಲ್ಲಿ ಎಲ್ಲಾ ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ಎಂಟು ಜನರನ್ನು - ಹೊಡೆದು ಜೀವಂತವಾಗಿ ಸುಟ್ಟು ಹಾಕಿತ್ತು.
ಸಂಸತ್ತಿನ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಗಂಗುಲಿ, ರಾಜ್ಯ ಸರಕಾರವು ದುಷ್ಕರ್ಮಿಗಳನ್ನು ರಕ್ಷಿಸುತ್ತಿದೆ ಎಂದು ಆರೋಪಿಸಿದರು.





