ತಿರುವನಂತಪುರಂ ವಿಮಾನ ನಿಲ್ದಾಣದಿಂದ ಇಂಗ್ಲೆಂಡ್ನ ಖ್ಯಾತ ಅರ್ಥಶಾಸ್ತ್ರಜ್ಞರನ್ನು ವಾಪಸ್ ಕಳುಹಿಸಿದ ಅಧಿಕಾರಿಗಳು

ಫಿಲಿಪ್ಪೊ ಒಸೆಲ್ಲಾ (Photo: Facebook)
ಹೊಸದಿಲ್ಲಿ: ಇಂಗ್ಲೆಂಡ್ನ ಖ್ಯಾತ ಮಾನವಶಾಸ್ತ್ರಜ್ಞ ಫಿಲಿಪ್ಪೊ ಒಸೆಲ್ಲಾ ಅವರನ್ನು ಗುರುವಾರ ಅವರು ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆಯೇ ಯಾವುದೇ ಅಧಿಕೃತ ಕಾರಣ ನೀಡದೆ ವಾಪಸ್ ಕಳುಹಿಸಲಾಗಿದೆ ಎಂದು ವರದಿಯಾಗಿದೆ.
ಇಂಗ್ಲೆಂಡ್ನ ಯುನಿವರ್ಸಿಟಿ ಆಫ್ ಸಸ್ಸೆಕ್ಸ್ ನ ಇಂಟರ್ ನ್ಯಾಷನಲ್ ಡೆವಲೆಪ್ಮೆಂಟ್ ಎಂಡ್ ಕಲ್ಚರ್ ಸ್ಟಡೀಸ್ ವಿಭಾಗದಲ್ಲಿ ಮಾನವಶಾಸ್ತ್ರ ಮತ್ತು ದಕ್ಷಿಣ ಏಷ್ಯಾ ಅಧ್ಯಯನ ಪ್ರೊಫೆಸರ್ ಆಗಿರುವ ಒಸೆಲ್ಲಾ ಅವರು ಇಂದು ಕೇರಳದಲ್ಲಿ ನಡೆಯಲಿದ್ದ ಸಮ್ಮೇಳನವೊಂದರಲ್ಲಿ ಪ್ರಮುಖ ಭಾಷಣಕಾರರಾಗಿದ್ದರು. ಈ ಕಾರ್ಯಕ್ರಮಕ್ಕೆಂದು ಆಗಮಿಸಿದ್ದ ಅವರನ್ನೇಕೆ ವಾಪಸ್ ಕಳುಹಿಸಲಾಗಿದೆ ಎಂಬುದಕ್ಕೆ ಇಮಿಗ್ರೇಶನ್ ಅಧಿಕಾರಿಗಳು ಯಾವುದೇ ಕಾರಣ ನೀಡಿಲ್ಲ ಆದರೆ ಹಿರಿಯಾಧಿಕಾರಿಗಳ ಆದೇಶದಂತೆ ಕ್ರಮ ಕೈಗೊಳ್ಳಲಾಗಿದೆ ಎಂದಷ್ಟೇ ಹೇಳಿದ್ದಾರೆ ಎಂದು indianexpress.com ವರದಿ ಮಾಡಿದೆ.
ಒಸೆಲ್ಲಾ ಅವರನ್ನು ವಾಪಸ್ ಕಳುಹಿಸಿರುವ ಕುರಿತಂತೆ ಅವರು ಇಂದು ಭಾಗವಹಿಸಲಿದ್ದ ಕಾರ್ಯಕ್ರಮದ ಸಂಘಟಕರೂ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಗುರುವಾರ ಬೆಳಿಗ್ಗೆ ವಿಮಾನದಿಂದ ಬಂದಿಳಿಯತ್ತಿದ್ದಂತೆಯೇ ಸಾಮಾನ್ಯ ಪ್ರಕ್ರಿಯೆಯಂತೆ ಅವರನ್ನು ಇಮಿಗ್ರೇಶನ್ ಡೆಸ್ಕ್ ಗೆ ಕರೆದೊಯ್ಯಲಾಯಿತು, ನಂತರ ಅವರ ಪಾಸ್ಪೋರ್ಟ್ ಸ್ಕ್ಯಾನ್ ಮಾಡಿ, ಫೋಟೋ ಮತ್ತು ಬೆರಳಚ್ಚು ತೆಗೆದುಕೊಂಡ ನಂತರ, ನಿಮಗೆ ಭಾರತ ಪ್ರವೇಶಿಸಲು ಅನುಮತಿಯಿಲ್ಲ ತಕ್ಷಣ ವಾಪಸ್ ಕಳಹಿಸಲಾಗುವುದು ಎಂದು ತಿಳಿಸಲಾಗಿತ್ತು.
ತಾನು ಇಲ್ಲಿಗೆ ಆಗಮಿಸುವ ಮುನ್ನವೇ ತಮ್ಮನ್ನು ವಾಪಸ್ ಕಳುಹಿಸುವ ನಿರ್ದಾರ ಕೈಗೊಳ್ಳಲಾಗಿತ್ತು, ಎಮಿರೇಟ್ಸ್ ಏರ್ಲೈನ್ ಉದ್ಯೋಗಿಯೊಬ್ಬರು ಅದಾಗಲೇ ದುಬೈಗೆ ತಮ್ಮ ವಿಮಾನ ಟಿಕೆಟ್ ಕಾದಿರಿಸಿದ್ದರು ಎಂದು ಒಸೆಲ್ಲಾ ಹೇಳಿದ್ದಾರೆ.
ಇಮಿಗ್ರೇಶನ್ ಅಧಿಕಾರಿಗಳು ಒರಟಾಗಿ ವರ್ತಿಸಿದ್ದರು, 'ಭಾರತ ಸರಕಾರದ ಆದೇಶ' ಎಂದಷ್ಟೇ ಹೇಳಿದರು ಎಂದು ಒಸೆಲ್ಲಾ ಹೇಳಿದ್ದಾರೆ.
ಕೇರಳದ ಸಮಾಜದ ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಿವರ್ತನೆಗಳ ಕುರಿತಂತೆ ಕಳೆದ 30 ವರ್ಷಗಳಿಂದ ಅಧ್ಯಯನ ನಡೆಸಿರುವ ಒಸೆಲ್ಲಾ ಅವರ ಕೆಲಸಗಳು ರಾಜಕೀಯವಾಗಿ ವಿವಾದಿತವಲ್ಲ. ಅವರು ಸಾಮಾನ್ಯ ಜನರು, ಅವರ ಸಂಬಂಧಗಳು, ಸಮಾಜದ ಜತೆಗಿನ ಅವರ ಸಂಬಂಧ ಮುಂತಾದ ವಿಚಾರಗಳ ಅಧ್ಯಯನ ನಡೆಸುತ್ತಾರೆ ಎಂದು indianexpress.com ವರದಿ ಮಾಡಿದೆ.
ಅವರು ಕೇರಳದ ಮುಸ್ಲಿಂ ಸಮುದಾಯದ ಬಗ್ಗೆಯೂ ಅಧ್ಯಯನ ನಡೆಸಿದ್ದರೂ ಅವರು ವಿವಾದಾತ್ಮಕ ವಿಚಾರಗಳಿಂದ ಯಾವತ್ತೂ ದೂರವಿದ್ದರು ಎಂದು ಅವರ ಬಗ್ಗೆ ತಿಳಿದಿರುವ ಸಂಶೋದಕರು ಹೇಳುತ್ತಾರೆ.
ಅವರು ಇಂದು ಭಾಗವಹಿಸಲಿದ್ದ ಸಮ್ಮೇಳನವನ್ನು ಕೊಚ್ಚಿನ್ ಯುನಿವರ್ಸಿಟಿ ಆಫ್ ಸಾಯನ್ಸ್ ಎಂಡ್ ಟೆಕ್ನಾಲಜಿ, ಸೆಂಟರ್ ಫಾರ್ ಡೆವಲೆಪ್ಮೆಂಟ್ ಸ್ಟಡೀಸ್ ತಿರುವನಂತಪುರಂ, ಇಂಟರ್ ಯುನಿವರ್ಸಿಟಿ ಸೆಂಟರ್ ಫಾರ್ ಆಲ್ಟರ್ನೇಟಿವ್ ಇಕನಾಮಿಕ್ಸ್, ಯುನಿವರ್ಸಿಟಿ ಆಫ್ ಕೇರಳ ಮತ್ತು ಯುನಿವರ್ಸಿಟಿ ಆಫ್ ಸಸ್ಸೆಕ್ಸ್ ಆಯೋಜಿಸಿದ್ದವು.







