ಬಿಜೆಪಿಯಿಂದ ದ್ವೇಷದ ರಾಜಕಾರಣ: ಸಿದ್ದರಾಮಯ್ಯ ವಾಗ್ದಾಳಿ
"ರೇಣುಕಾಚಾರ್ಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ"

ಮೈಸೂರು, ಮಾ.25: ಬಿಜೆಪಿಯವರು ಸ್ನೇಹದ ರಾಜಕಾರಣ ಮಾಡುತ್ತಿಲ್ಲ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ತಮ್ಮ ಸ್ವಗ್ರಾಮ ಸಿದ್ದರಾಮನಹುಂಡಿಯಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಹಾಗಾಗಿಯೇ ಹಿಜಾಬ್ ತಂದರು, ಚರ್ಚ್‍ಗಳ ಮೇಲೆ ದಾಳಿ ನಡೆಸಿದರು. ಇದೀಗ ಜಾತ್ರೆಗಳಲ್ಲಿ ಮುಸ್ಲಿಮರಿಗೆ ಅವಕಾಶ ನೀಡಬಾರದು ಎಂದು ಹೇಳುತ್ತಿದ್ದಾರೆ. ಬಿಜೆಪಿಯವರದ್ದು ಅಮಾನವೀಯ ನಡೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೊದಲು ಮನುಷ್ಯ ಮನುಷ್ಯರಿಗೆ ಗೌರವ ಕೊಡುವುದನ್ನು ಕಲಿಯಬೇಕು, ಮಳೆ ಬಂದರೆ ಎಲ್ಲರೂ ಒಂದು ಮರದ ಕೆಳಗೆ ಆಶ್ರಯ ಪಡೆಯುತ್ತೇವೆ. ಅಲ್ಲಿ ನೀನು ಮುಸ್ಲಿಮ್ ಬೇರೆ ಮರದಡಿ ನಿಲ್ಲು, ಕ್ರಿಶ್ಚಿಯನ್ ಬೇರೆ ಮರದಡಿಗೆ ಹೋಗು, ಹಿಂದು ಒಂದು ಮರದ ಅಡಿ ನಿಲ್ಲುತ್ತೇವೆ ಎಂದು ಹೇಳುತ್ತಾರ? ಈಗ ಯಾರಿಗಾದರೂ ಶಸ್ತ್ರಚಿಕಿತ್ಸೆಗೆ ಒಳಗಾದರೆ ನನಗೆ ಹಿಂದೂ ರಕ್ತವನ್ನೇ ಕೊಡಿ ಎಂದು ಹೇಳುತ್ತಾರ? ಹಾಗಾಗಿ ಮೊದಲು ನಾವು ಮಾನವೀಯತೆ ಕಲಿಯಬೇಕು ಎಂದು ತಿರುಗೇಟು ನೀಡಿದರು.
ಶಾಲಾ ಕಾಲೇಜಿಗೆ ಹೋಗುವ ಮುಸ್ಲಿಮ್ ಹೆಣ್ಣುಮಕ್ಕಳಿಗೆ ದುಪ್ಪಟ್ಟ ಹಾಕಲು ಅವಕಾಶ ನೀಡಬೇಕು. ಯಾಕೆ ನಮ್ಮ ಜೈನ ಸಮುದಾಯದ ಹೆಣ್ಣುಮಕ್ಕಳು ತಲೆ ಮೇಲೆ ಬಟ್ಟೆ ಹೊದ್ದುಕೊಳ್ಳುವುದಿಲ್ಲವೇ? ಇನ್ನು ಸ್ವಾಮೀಜಿಗಳು ತಲೆ ಮೇಲೆ ಬಟ್ಟೆ ಹಾಕಿಕೊಳ್ಳುವುದಿಲ್ಲವೇ? ಮುಸ್ಲಿಮ್ ಹೆಣ್ಣುಮಕ್ಕಳು ದುಪ್ಪಟ್ಟ ಹಾಕಿಕೊಂಡರೆ ನಿಮಗೇನು ತೊಂದರೆ? ಎಂದು ಪ್ರಶ್ನಿಸಿದರು.
ಇನ್ನೊಂದು ವರ್ಷಕ್ಕೆ ಚುನಾವಣೆ ಬರಲಿದೆ. ಹಾಗಾಗಿ ಬಿಜೆಪಿಯವರು ಮತ ಕ್ರೋಡೀಕರಣಕ್ಕಾಗಿ ಕೆಲವು ವಿಚಾರಗಳನ್ನು ತರುತ್ತಿದ್ದಾರೆ. ಜಾತ್ರೆಗಳಲ್ಲಿ ಮುಸ್ಲಿಮರು ವ್ಯಾಪಾರ ಮಾಡಬಾರದು ಎಂದು ಹೇಳಿದರೆ ಜನರಿಗೆ ಅರ್ಥವಾಗುವುದಿಲ್ಲವೇ? ಯಾರು ಎಲ್ಲಿ ವ್ಯಾಪಾರ ಮಾಡಬೇಕು ಎಂದು ಅವರ ಮೂಲಭೂತ ಹಕ್ಕು, ಯಾವುದೇ ಸಂಘ ಸಂಸ್ಥೆಗಳು ಫ್ಲೆಕ್ಸ್ ಬ್ಯಾನರ್ ಕಟ್ಟುತ್ತಾರೆ ಎಂದರೆ ಬಿಜೆಪಿಯವರ ಕುಮ್ಮಕ್ಕು ಇಲ್ಲದೆ ಆ ರೀತಿ ಕಟ್ಟುತ್ತಾರ ಎಂದು ಹರಿಹಾಯ್ದರು.
ಬಿಜೆಪಿಯವರು ಅಭಿವೃದ್ಧಿ ಹೆಸರಿನಲ್ಲಿ ಮತ ಕೇಳಲು ಸಾಧ್ಯವಾಗುತ್ತಿಲ್ಲ, ಹಾಗಾಗಿ ಗೊಂದಲಗಳನ್ನು ಉಂಟು ಮಾಡುತ್ತಿದ್ದಾರೆ. ರೈತರು ಬೆಳೆದ ರಾಗಿಗೆ ಬೆಂಬಲ ಬೆಲೆ ಕೊಡಿಸಲು ಇವರ ಕೈಯಲ್ಲಿ ಆಗುತ್ತಿಲ್ಲ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಅದಗೆಟ್ಟಿದೆ. ಬೆಲೆ ಏರಿಕೆ ಮಿತಿಮೀರಿದೆ, ಉತ್ತರ ಪ್ರದೇಶ ಚುನಾವಣೆ ನಂತರ ಮತ್ತೆ ಪೆಟ್ರೋಲ್ ಬೆಲೆ ಹೆಚ್ಚಳ ಮಾಡಿದ್ದಾರೆ. ಗ್ಯಾಸ್ 50 ರೂ. ಹೆಚ್ಚಳವಾಗಿದೆ. ಅಡುಗೆ ಎಣ್ಣೆ 200 ರೂ. ಆಗಿದೆ. ಜನರ ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.
ರೇಣುಕಾಚಾರ್ಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ
ಶಾಸಕ ಎಂ.ಪಿ.ರೇಣುಕಾಚಾರ್ಯ ತಮ್ಮ ಮಗಳ ಹರಸರಿನಲ್ಲಿ ಎಸ್ಸಿ ಜಾತಿ ಪ್ರಮಾಣ ಪತ್ರ ಪಡೆದಿತುವ ಬಗ್ಗೆ ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ನಕಲಿ ಜಾತಿ ಪ್ರಮಾಣ ಪತ್ರ ಪಡೆದು ಸರ್ಕಾರದ ಸವಲತ್ತುಗಳನ್ನು ಪಡೆದಿದ್ದಾರೆ. ಇದೊಂದು ಕ್ರಿಮಿನಲ್ ಪ್ರಕರಣ ಹಾಗಾಗಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮೊದಲು ರೇಣುಕಾಚಾರ್ಯ ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ಅವರನ್ನು ವಜಾಗೊಳಿಸಬೇಕು ಎಂದು ಹೇಳಿದರು.
ರೇಣುಕಾಚಾರ್ಯರನ್ನು ಸರ್ಕಾರ ಸಮರ್ಥಿಸಿಕೊಳ್ಳುತ್ತದೆ ಎಂದರೆ ಕಾನೂನುಬಾಹಿರ ಕೆಲಸಕ್ಕೆ ಪ್ರೋತ್ಸಾಹ ನೀಡಿದಂತೆ. ಜಂಗಮ ಸಮುದಾಯಕ್ಕೆ ಸೇರಿದ ರೇಣುಕಾಚಾರ್ಯ ತಮ್ಮ ಪುತ್ತಿಗೆ ಎಸ್ಸಿ ಪ್ರಮಾಣ ಪತ್ರ ಕೊಡಿಸಿರುವುದನ್ನು ಸರ್ಕಾರ ಸಮರ್ಥಿಸಿಕೊಳ್ಳುತ್ತದೆ ಎಂದರೆ ಏನರ್ಥ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.







