ನಿಮಗೆ ಅಧಿಕಾರ ಬೇಕಿದ್ದರೆ ನನ್ನನ್ನು ಬಂಧಿಸಿ: ಬಿಜೆಪಿ ವಿರುದ್ಧ ಉದ್ಧವ್ ಠಾಕ್ರೆ ವಾಗ್ದಾಳಿ

ಮುಂಬೈ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ತನ್ನ ಸೋದರ ಸಂಬಂಧಿಗೆ ಸೇರಿದ ರೂ. 6.45 ಕೋಟಿ ಮೌಲ್ಯದ ಆಸ್ತಿಯನ್ನು ಇಡಿ (ಜಾರಿ ನಿರ್ದೇಶನಾಲಯ) ಜಪ್ತಿಗೊಳಿಸಿದ ಮೂರು ದಿನಗಳ ಬಳಿಕ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಿಮಗೆ ಅಧಿಕಾರಕ್ಕೆ ಬರಬೇಕೆಂದಿದ್ದರೆ ಬನ್ನಿ, ಆದರೆ ಅಧಿಕಾರಕ್ಕೆ ಬರಲು ಈ ಎಲ್ಲಾ ಕೆಟ್ಟ ಕೆಲಸಗಳನ್ನು ಮಾಡಬೇಡಿ. ನಮ್ಮ ಅಥವಾ ಇತರೆ ಯಾರದ್ದೇ ಕುಟುಂಬದ ಸದಸ್ಯರಿಗೆ ಕಿರುಕುಳ ನೀಡಬೇಡಿ. ನಿಮ್ಮ ಕುಟುಂಬಕ್ಕೆ ನಾವು ಎಂದಿಗೂ ತೊಂದರೆ ನೀಡಿಲ್ಲ ಎಂದು ಠಾಕ್ರೆ ವಿಧಾನಸಭೆಯಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಹಾಗಂತ, ನಿಮ್ಮ ಕುಟುಂಬದವರು ತಪ್ಪು ಮಾಡಿದ್ದಾರೆಂದೋ ಅಥವಾ ನಮ್ಮಿಂದ ತೊಂದರೆಗೆ ಈಡಾಗುವಂತಹದ್ದು ಮಾಡಿದ್ದಾರೆಂದು ಅಲ್ಲ. ನಿಮಗೆ ಅಧಿಕಾರಕ್ಕೆ ಬರಲು ನಮ್ಮನ್ನು ಜೈಲಿಗೆ ಹಾಕಬೇಕೆಂದಿದ್ದರೆ, ನನ್ನನ್ನು ಜೈಲಿಗೆ ಹಾಕಿ ಎಂದು ಠಾಕ್ರೆ ಮನವಿ ಮಾಡಿದ್ದಾರೆ.
ಉದ್ಧವ್ ಠಾಕ್ರೆ ಅವರ ಸೋದರ ಸಂಬಂಧಿಯ ಆಸ್ತಿಯನ್ನು ಜಪ್ತಿಗೊಳಿಸಿದ ಎರಡು ವಾರಗಳ ಬಳಿಕ ಆದಾಯ ತೆರಿಗೆ ಇಲಾಖೆಯು ಅವರ ಪುತ್ರ ಆದಿತ್ಯ ಠಾಕ್ರೆ ಮತ್ತು ಸಹೋದ್ಯೋಗಿ ಅನಿಲ್ ಪರಬ್ ಅವರ ನಿಕಟವರ್ತಿಗಳ ಮೇಲೆ ಸತತ ದಾಳಿ ನಡೆಸುತ್ತಿದೆ. ಈ ಹಿನ್ನೆಲೆ ಕೇಂದ್ರ ಸರ್ಕಾರ ರಾಜಕೀಯ ಎದುರಾಳಿಗಳನ್ನು ಗುರಿಯಾಗಿಸಿಕೊಂಡು ಐಟಿ, ಇಡಿ ದಾಳಿ ನಡೆಸುತ್ತಿದೆ ಎಂದು ಶಿವಸೇನೆ ಕಿಡಿಕಾರಿತ್ತು.







