ಮಂಗಳೂರು ತಾಲೂಕು ಕಸಾಪ ಘಟಕಕ್ಕೆ ಚಾಲನೆ

ಮಂಗಳೂರು: ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಘಟಕದ ಉದ್ಘಾಟನೆ ಹಾಗೂ ಪದಗ್ರಹಣ ಕಾರ್ಯಕ್ರಮವು ಶುಕ್ರವಾರ ನಗರದ ಎಸ್‌ಡಿಎಂ ಕಾನೂನು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಕಸಾಪ ಘಟಕವನ್ನು ಉದ್ಘಾಟಿಸಿ ಮಾತನಾಡಿದ ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಕನ್ನಡದ ಪುಸ್ತಕಗಳನ್ನು ಖರೀದಿಸುವ ಮೂಲಕ ಕನ್ನಡತನವನ್ನು ಮೆರೆಯಬೇಕು. ಕರಾವಳಿಯ ಜನತೆ ಧಾರ್ಮಿಕ ವಿಚಾರದಲ್ಲಿರುವ ಉತ್ಸಾಹವನ್ನು ಕಲೆ, ಸಂಸ್ಕೃತಿಯಲ್ಲೂ ತೋರಿಸಬೇಕು ಎಂದರು.
ಕನ್ನಡ ಉಳಿಸುವ ಭರಾಟೆಯಲ್ಲಿ ಇತರ ಭಾಷೆಗಳನ್ನು ವಿರೋಧಿಸುವುದು ಸರಿಯಲ್ಲ. ಇತರ ಭಾಷೆಗಳನ್ನು ಕಲಿಯುವುದರ ಜೊತೆಗೆ ಕನ್ನಡಿಗರಿಗೆ ಕನ್ನಡವನ್ನು ಉಳಿಸುವ ಮಹತ್ತರ ಹೊಣೆಗಾರಿಕೆಯಿದೆ. ಭಾರತದ ವೈವಿಧ್ಯತೆಯ ವಿಚಾರದಲ್ಲಿ ಕರ್ನಾಟಕದ ವೈವಿಧ್ಯತೆಯ ಪಾಲು ಬಹಳ ದೊಡ್ಡದಿದೆ. ಇತರ ರಾಜ್ಯಗಳಲ್ಲಿನ ವೈವಿಧ್ಯತೆಯ ಅಂತರಕ್ಕೂ ರಾಜ್ಯದ ಅಂತರಕ್ಕೂ ತುಂಬಾ ವ್ಯತ್ಯಾಸವಿದೆ. ಕರಾವಳಿಯಲ್ಲಂತೂ ಕನಿಷ್ಟ 10 ಕಿ.ಮೀ ಅಂತರದಲ್ಲಿ ಭಾಷೆ, ನುಡಿ, ಸಂಸ್ಕೃತಿಯಲ್ಲಿ ಬದಲಾವಣೆ ಕಾಣಿಸಿಕೊಳ್ಳುತ್ತಿದೆ ಎಂದರು.
ಅಖಿಲ ಭಾರತ ಪ್ರಶಿಕ್ಷಣ ಪ್ರಮುಖ ಸಂಸ್ಕೃತ ಭಾರತಿ ಡಾ.ಎಚ್.ಆರ್. ವಿಶ್ವಾಸ್, ದ.ಕ. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಂ.ಪಿ. ಶ್ರೀನಾಥ್, ಕಸಾಪ ಮಂಗಳೂರು ತಾಲೂಕು ಅಧ್ಯಕ್ಷ ಡಾ. ಮಂಜುನಾಥ್ ಎಸ್. ರೇವಣಕರ್, ಗೌರವ ಕಾರ್ಯದರ್ಶಿ ಮುರಳಿ ಮೋಹನ್ ಚೂಂತಾರು, ಗಣೇಶ್ ಪ್ರಸಾದ್ ಜೀ, ಕೋಶಾಧಿಕಾರಿ ಎನ್. ಸುಬ್ರಾಯ ಭಟ್, ನಿಕಟಪೂರ್ವ ಅಧ್ಯಕ್ಷೆ ವಿಜಯಲಕ್ಷ್ಮಿ ಶೆಟ್ಟಿ ಮತ್ತಿತರರು ಭಾಗವಹಿಸಿದ್ದರು.
