ಕೈಗಾರಿಕೆಗಳಿಗೆ ಸಾಲ ಕೊಡಲು ಬ್ಯಾಂಕುಗಳಿಗೆ ಸೂಚನೆ: ಸಚಿವ ಎಂಟಿಬಿ ನಾಗರಾಜ್

ಸಾಂದರ್ಭಿಕ ಚಿತ್ರ
ಬೆಂಗಳೂರು, ಮಾ. 25: ‘ರಾಜ್ಯದಲ್ಲಿ ಒಂದು ಕೋಟಿ ರೂಪಾಯಿಯಷ್ಟು ಮೊತ್ತದ ಬಂಡವಾಳ ಹೂಡಿಕೆ ಮಾಡುವ ಸಣ್ಣ ಕೈಗಾರಿಕೆಗಳಿಗೆ ಶೇ.35ರಷ್ಟು ವೆಚ್ಚ ಸಹಾಯಧನ ದೊರೆಯಲಿದೆ' ಎಂದು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಎಂ.ಟಿ.ಬಿ.ನಾಗರಾಜ್ ತಿಳಿಸಿದ್ದಾರೆ.
ಶುಕ್ರವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಅವರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ‘ಕೈಗಾರಿಕೆಗಳಿಗೆ ನಿಗದಿತ ಸಮಯದಲ್ಲಿ ಸಾಲ ಕೊಡಲು ಬ್ಯಾಂಕುಗಳಿಗೆ ಸೂಚನೆ ನೀಡಲಾಗುವುದು. ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಸಹಾಯಧನ ಪಡೆಯಲು ಆದಾಯ ಮಿತಿ ವಿಧಿಸುವ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು' ಎಂದು ಹೇಳಿದರು.
‘2021-22ನೆ ಸಾಲಿನಲ್ಲಿ ಪ್ರಧಾನಿಯವರ ಉದ್ಯೋಗ ಸೃಜನೆ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 298 ಫಲಾನುಭವಿಗಳು ಸೌಲಭ್ಯ ಪಡೆದಿದ್ದಾರೆ. ಅದೇ ರೀತಿಯಲ್ಲಿ 2020-21ನೆ ಸಾಲಿನಲ್ಲಿ 387 ಜನರು ಸೌಲಭ್ಯ ಪಡೆದಿದ್ದಾರೆ ಎಂದ ಅವರು, ಎಸ್ಸಿ-ಎಸ್ಟಿ ಉದ್ಯಮಶೀಲರಿಗೆ ವಿಶೇಷ ಘಟಕ ಉಪಯೋಜನೆಯಡಿ ಸ್ವಯಂ ಉದ್ಯೋಗ ಕೈಗೊಳ್ಳಲು ಸಾಲ ಒದಗಿಸಿ ಯೋಜನಾ ವೆಚ್ಚದ ಮೇಲೆ ಶೇ.60ರಷ್ಟು ಗರಿಷ್ಠ 5 ಲಕ್ಷ ರೂ. ಸಹಾಯಧನವನ್ನು ನೀಡಲಿದೆ' ಎಂದು ಅವರು ವಿವರ ನೀಡಿದರು.
ಆರಂಭಕ್ಕೆ ವಿಷಯ ಪ್ರಸ್ತಾಪಿಸಿದ ಯು.ಟಿ.ಖಾದರ್ ಅವರು, ‘ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸಲು ಬ್ಯಾಂಕುಗಳು ಸೂಕ್ತ ಸಮಯದಲ್ಲಿ ಸಾಲ ಸೌಲಭ್ಯ ನೀಡುವುದಿಲ್ಲ. ಈ ಬಗ್ಗೆ ಸರಕಾರ ಬ್ಯಾಂಕುಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ ಸಾಲ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಬೇಕು. ಇದರಿಂದ ಒಂದು ಕೈಗಾರಿಕೆ ಸ್ಥಾಪನೆ, ಜೊತೆಗೆ ಉದ್ಯೋಗ ಸೃಜನೆಗೆ ಅನುಕೂವಾಗಲಿದೆ' ಎಂದು ಸಲಹೆ ನೀಡಿದರು.







