ಪೊಲೀಸ್ ಇಲಾಖೆಯ ಮೊಹರು, ಸಹಿ ಇಲ್ಲದೆ ಪತ್ರಿಕಾ ಪ್ರಕಟನೆ ಹೊರ ಬರುತ್ತಿವೆ: ಕಾಂಗ್ರೆಸ್ ವಕ್ತಾರ ರಮೇಶ್ ಬಾಬು ಆರೋಪ

ರಮೇಶ್ ಬಾಬು ಆರೋಪ
ಬೆಂಗಳೂರು, ಮಾ.25: ಆಡಳಿತಾತ್ಮಕವಾಗಿ ಮತ್ತು ಸಾರ್ವಜನಿಕ ಮಾಹಿತಿಗಾಗಿ ಪೊಲೀಸ್ ಇಲಾಖೆಯ ಅನೇಕ ವಿಭಾಗಗಳು, ಆಯಾ ಸಂದರ್ಭಗಳಲ್ಲಿ ಪತ್ರಿಕಾ ಪ್ರಕಟಣೆ ಅಥವಾ ಹೇಳಿಕೆ ನೀಡಬೇಕಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಪೊಲೀಸ್ ಇಲಾಖೆಯ ಬಹುತೇಕ ವಿಭಾಗಗಳು ಇಲಾಖೆಯ ಮೊಹರಾಗಲಿ, ಅಧಿಕಾರಿಯ ಪದನಾಮವಾಗಲಿ ಅಥವಾ ಸಹಿಯಾಗಲಿ ಇಲ್ಲದೆ ಪತ್ರಿಕಾ ಪ್ರಕಟನೆ , ಹೇಳಿಕೆ, ಮಾಹಿತಿ ನೀಡುತ್ತಿವೆ ಎಂದು ವಿಧಾನಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು ದೂರಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಅವರು, ಅಧಿಕೃತ ಸಹಿ ಇಲ್ಲದೆ ಇಂತಹ ಮಾಹಿತಿ ಬಹಿರಂಗ ಪಡಿಸಲು ಪೊಲೀಸ್ ಇಲಾಖೆಯ ಕಾಯ್ದೆಗಳಲ್ಲಾಗಲಿ, ನಿಯಮಾವಳಿಗಳಲ್ಲಾಗಲಿ, ಕ್ರಿಮಿನಲ್ ಪ್ರಕ್ರಿಯೆ ಸಂಹಿತೆಯಲ್ಲಾಗಲಿ ಅವಕಾಶ ಇರುವುದಿಲ್ಲ ಎಂದು ತಿಳಿಸಿದ್ದಾರೆ.
ಆದರೂ, ಪೊಲೀಸ್ ಠಾಣೆಯ ಮಾಹಿತಿಗಳು, ಪೊಲೀಸ್ ಆಯುಕ್ತರ ಮಾಹಿತಿಗಳು, ಭ್ರಷ್ಟಾಚಾರ ನಿಗ್ರಹ ಪಡೆಯ ಮಾಹಿತಿಗಳು, ಸಿಸಿಬಿ ಮತ್ತು ಸಿಐಡಿ ವಿಭಾಗದ ಮಾಹಿತಿಗಳು, ಪತ್ರಿಕಾ ಪ್ರಕಟಣೆಗಳು ಇಲಾಖೆಯ ಮೊಹರು ಮತ್ತು ಸಹಿಯಿಲ್ಲದೆ ಪ್ರಕಟಗೊಳ್ಳುತ್ತಿವೆ. ಇಂತಹ ಪ್ರಕಟಣೆಗಳಿಗೆ ನ್ಯಾಯಾಲಯಗಳ ಸಮ್ಮತಿ ಇರುವುದಿಲ್ಲ. ಮತ್ತು ಇವು ಕಾನೂನಾತ್ಮಕವೂ ಅಲ್ಲ. ಅಧಿಕೃತವಾಗಿ ಮೊಹರು ಮತ್ತು ಸಹಿ ಇಲ್ಲದೆ ಹೋದರೆ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಅವಕಾಶವಿರುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಆದುದರಿಂದ, ಗೃಹ ಇಲಾಖೆಯ ಕಾರ್ಯದರ್ಶಿ ಮುಖಾಂತರ ಪೊಲೀಸ್ ಇಲಾಖೆಗೆ ಸೂಕ್ತ ನಿರ್ದೇಶನ ನೀಡಿ, ಪೊಲೀಸ್ ಇಲಾಖೆಯ ಯಾವುದೆ ವಿಭಾಗದಿಂದ ನೀಡುವ ಮಾಹಿತಿ, ಪತ್ರಿಕಾ ಪ್ರಕಟಣೆ ಅಥವಾ ಹೇಳಿಕೆಗಳು ಇಲಾಖೆಯ ಮೊಹರು, ಸಹಿ, ದಿನಾಂಕ ಮತ್ತು ಅಧಿಕಾರಿಯ ಪದನಾಮ ಒಳಗೊಳ್ಳಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರಮೇಶ್ ಬಾಬು ಮನವಿ ಮಾಡಿದ್ದಾರೆ.







