ತುಮಕೂರು: ಭೂ ದಾಖಲೆಗಳ ವಿಭಾಗದ ಮೇಲ್ವಿಚಾರಕ ಎಸಿಬಿ ಬಲೆಗೆ

ತುಮಕೂರು,ಮಾ.25:ಜಮೀನಿನ ಸರ್ವೆ ದಾಖಲೆಗಳನ್ನು ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ತುಮಕೂರು ತಾಲೂಕು ಕಚೇರಿ ಭೂ ದಾಖಲೆ ವಿಭಾಗದ ಮೇಲ್ವಿಚಾರಕ ಲಕ್ಷ್ಮಯ್ಯ ಅವರನ್ನು ಎಸಿಬಿ ಪೊಲೀಸರು ಬಂಧಿಸಿದ್ದಾರೆ.
ತಾಲೂಕು ಅಜ್ಜಿಪ್ಪನಹಳ್ಳಿ ಸರ್ವೇ 14ರಲ್ಲಿ ನಡೆಯುತ್ತಿದೆ ಎನ್ನಲಾದ ಅಕ್ರಮ ಗಣಿಗಾರಿಕೆ ಕುರಿತಂತೆ ಜಮೀನಿನ ದಾಖಲೆಗಳನ್ನು ಸಾಮಾಜಿಕ ಕಾರ್ಯಕರ್ತ ನಾಗರಾಜು ಕೇಳಿದ್ದು, ಇದನ್ನು ನೀಡಲು 5 ಸಾವಿರ ಲಂಚದ ಬೇಡಿಕೆಯನ್ನು ಅಭಿಲೇಖಾಲಯದ ಮೇಲ್ವಿಚಾರಕ ಲಕ್ಷ್ಮಯ್ಯ ಇಟ್ಟಿದ್ದರು ಎನ್ನಲಾಗಿದೆ. ಈ ಹಿಂದೆಯೇ ಒಂದು ಸಾವಿರ ರೂಗಳ ಮುಂಗಡ ನೀಡಿದ್ದ ನಾಗರಾಜು, ಈ ಸಂಬಂಧ ಎಸಿಬಿಗೆ ದೂರು ನೀಡಿದ್ದರು. ಇಂದು ಉಳಿದ ನಾಲ್ಕು ಸಾವಿರ ರೂಗಳನ್ನು ಪಡೆಯುವ ವೇಳೆ ಲಕ್ಷ್ಮಯ್ಯ ಅವರನ್ನು ಅವರ ಕಚೇರಿಯಲ್ಲಿಯೇ ಲಂಚದ ಹಣದ ಸಮೇತ ಎಸಿಬಿಯವರು ಬಂಧಿಸಿ,ಮುಂದಿನ ವಿಚಾರಣೆಗೆ ಒಳಪಡಿಸಿದ್ದಾರೆ.
Next Story





