ಪಿಎಂ-ಕೇರ್ಸ್ ನಿಧಿಯನ್ನು ಬಹಿರಂಗಗೊಳಿಸಲು ಕೋರಿದ್ದ ಅರ್ಜಿಯ ಅಂಗೀಕಾರಕ್ಕೆ ಸುಪ್ರೀಂ ನಕಾರ

ಹೊಸದಿಲ್ಲಿ,ಮಾ.25: ಪಿಎಂ-ಕೇರ್ಸ್ ನಿಧಿಯ ಖಾತೆಗಳು, ಚಟುವಟಿಕೆ ಮತ್ತು ವೆಚ್ಚದ ವಿವರಗಳನ್ನು ಬಹಿರಂಗಗೊಳಿಸಲು ಹಾಗೂ ಅದನ್ನು ಸಿಎಜಿ ಲೆಕ್ಕಪರಿಶೋಧನೆಗೆ ಮುಕ್ತಗೊಳಿಸುವಂತೆ ಕೇಂದ್ರಕ್ಕೆ ನಿರ್ದೇಶನ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಅಂಗೀಕರಿಸಲು ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ನಿರಾಕರಿಸಿದೆ.
ಅಲಹಾಬಾದ್ ಉಚ್ಚ ನ್ಯಾಯಾಲಯವನ್ನು ಸಂಪರ್ಕಿಸುವಂತೆ ಮತ್ತು ಈ ವಿಷಯದಲ್ಲಿ ಮರುಪರಿಶೀಲನೆ ಅರ್ಜಿಯನ್ನು ಸಲ್ಲಿಸುವಂತೆ ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರ ರಾವ್ ಮತ್ತು ಬಿ.ಆರ್.ಗವಾಯಿ ಅವರ ಪೀಠವು ಅರ್ಜಿದಾರರಿಗೆ ಸೂಚಿಸಿತು. ಕೋರಲಾಗಿರುವ ಪರಿಹಾರದ ವ್ಯಾಪ್ತಿಯು ಸಂಪೂರ್ಣವಾಗಿ ಭಿನ್ನವಾಗಿದೆ ಮತ್ತು ಪಿಎಂ-ಕೇರ್ಸ್ ನಿಧಿಯ ಸಿಂಧುತ್ವ ಮತ್ತು ಬಹಿರಂಗಗೊಳಿಸುವಿಕೆಯನ್ನು ಕೋರಲಾಗಿದೆ ಎಂದು ಅರ್ಜಿದಾರರ ಪರ ಹಿರಿಯ ವಕೀಲ ದೇವದತ್ತ ಕಾಮತ್ ಅವರು ನಿವೇದಿಸಿಕೊಂಡರು.
ಸೆಂಟರ್ ಫಾರ್ ಪಬ್ಲಿಕ್ ಇಂಟರೆಸ್ಟ್ ಲಿಟಿಗೇಷನ್ (ಸಿಪಿಐಎಲ್) ವಿರುದ್ಧ ಭಾರತ ಸರಕಾರ (2020) ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ನೆಚ್ಚಿಕೊಂಡು ಉಚ್ಚ ನ್ಯಾಯಾಲಯವು ಅರ್ಜಿಯನ್ನು ವಜಾಗೊಳಿಸಿದೆ ಮತ್ತು ಉಚ್ಚ ನ್ಯಾಯಾಲಯವು ಆ ತೀರ್ಪನ್ನು ಮಾತ್ರ ಅವಲಂಬಿಸಿದ್ದು ಸರಿಯಲ್ಲ ಎಂದು ಕಾಮತ್ ವಾದಿಸಿದರು. ‘ಎಲ್ಲ ವಿಷಯಗಳನ್ನು ಪರಿಗಣಿಸಲಾಗಿಲ್ಲ ಎಂದು ಹೇಳುತ್ತಿರುವುದು ಸರಿಯಿರಬಹುದು. ನೀವು ವಾದಿಸಿದ್ದಿರೇ ಎನ್ನುವುದು ನಮಗೆ ಗೊತ್ತಿಲ್ಲ. ನೀವು ಮರುಪರಿಶೀಲನೆ ಅರ್ಜಿಯನ್ನು ಸಲ್ಲಿಸಿ. ಅದರ ಲಾಭ ನಮಗೆ ಸಿಗಲಿ ’ ಎಂದು ಪೀಠವು ತಿಳಿಸಿತು.
2020,ಆ.31ರ ಅಲಹಾಬಾದ್ ಉಚ್ಚ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿಯನ್ನು ಸಲ್ಲಿಸಿದ್ದ ವಕೀಲ ದಿವ್ಯಪಾಲ ಸಿಂಗ್ ಅವರು,ಊಹೆಗೂ ನಿಲುಕದ ಮತ್ತು ಅಗಾಧ ಮೊತ್ತದ ಸಾರ್ವಜನಿಕ ಹಣವು ದಿನಿನಿತ್ಯವೂ ಅವ್ಯಾಹತವಾಗಿ ಪಿಎಂ-ಕೇರ್ಸ್ ನಿಧಿಯ ಬೊಕ್ಕಸಕ್ಕೆ ಹರಿದುಬರುತ್ತಿದೆ ಎಂದು ಆರೋಪಿಸಿದ್ದರು.







