ನಾಗರಿಕ ಸೇವಾ ಪರೀಕ್ಷೆಯಲ್ಲಿ ಹೆಚ್ಚುವರಿ ಪ್ರಯತ್ನ ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್‌ಗೆ ತಿಳಿಸಿದ ಕೇಂದ್ರ ಸರಕಾರ

ಹೊಸದಿಲ್ಲಿ, ಮಾ. 25: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ)ದ ನಾಗರಿಕ ಸೇವಾ ಪರೀಕ್ಷೆಯಲ್ಲಿ ಹೆಚ್ಚುವರಿ ಪ್ರಯತ್ನ ಸಾಧ್ಯವಿಲ್ಲ ಎಂದು ಕೇಂದ್ರ ಸರಕಾರ ಶುಕ್ರವಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ. 2021 ಯುಪಿಎಸ್ಸಿ ಪೂರ್ವಭಾವಿ ಪರೀಕ್ಷೆಯಲ್ಲಿ ಉತ್ತೀರ್ಣರಾದ, ಆದರೆ ಕೋವಿಡ್ ಪಾಸಿಟಿವ್ ಕಾರಣಕ್ಕೆ ಮುಖ್ಯ ಪರೀಕ್ಷೆಗಳಿಗೆ ಹಾಜರಾಗಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಹೆಚ್ಚುವರಿ ಪ್ರಯತ್ನಕ್ಕೆ ಅವಕಾಶ ನೀಡುವಂತೆ ಕೋರಿ ಮೂವರು ಅಭ್ಯರ್ಥಿಗಳು ಸಲ್ಲಿಸಿದ ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತು.
‘ನಾವು ಅಫಿಡಾವಿಟ್ ಸಲ್ಲಿಸಿದ್ದೇವೆ. ಹೆಚ್ಚುವರಿ ಪ್ರಯತ್ನ ಸಾಧ್ಯವಿಲ್ಲ. ನಾವು ಪರಿಶೀಲಿಸುತ್ತೇವೆ’ಎಂದು ಕೇಂದ್ರ ಸರಕಾರದ ಪರವಾಗಿ ನ್ಯಾಯಾಲಯದ ಮುಂದೆ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾತಿ ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್ ಹಾಗೂ ಎ.ಎಸ್. ಓಕಾ ಅವರನ್ನು ಒಳಗೊಂಡ ಪೀಠಕ್ಕೆ ತಿಳಿಸಿದರು.
ಅನಾರೋಗ್ಯ ಅಥವಾ ಅಪಘಾತ ಸೇರಿದಂತೆ ಯಾವುದೇ ಕಾರಣಗಳಿಗಾಗಿ ಪರೀಕ್ಷೆಗೆ ಹಾಜರಾಗಲು ಅಭ್ಯರ್ಥಿಯು ವಿಫಲವಾದಲ್ಲಿ ಮರು ಪರೀಕ್ಷೆ ನಡೆಸಲು ಯಾವುದೇ ಅವಕಾಶವಿಲ್ಲ ಎಂದು ಯುಪಿಎಸ್ಸಿ ಇತ್ತೀಚೆಗೆ ಸುಪ್ರೀಂ ಕೋರ್ಟ್ ಗೆ ತಿಳಿಸಿತ್ತು. ಶುಕ್ರವಾರ ವಿಚಾರಣೆಯ ವೇಳೆ ಭಾತಿ, ಕೇಂದ್ರ ಸರಕಾರ ಈ ಕುರಿತಂತೆ ಅಫಿಡವಿಟ್ ಸಲ್ಲಿಸಿದೆ ಎಂದು ತಿಳಿಸಿದರು. ಪ್ರಕರಣದ ವಿಚಾರಣೆಯನ್ನು ಮಾರ್ಚ್ 28ರಂದು ನಡೆಸಲಾಗುವುದು ಎಂದು ಪೀಠ ಹೇಳಿತು.







