ಆಯುಕ್ತರಿಗೆ ಕೊಲೆ ಬೆದರಿಕೆ ಪ್ರಕರಣ: ಚಾಮರಾಜನಗರ ನಗರಸಭೆ ಸದಸ್ಯನಿಗೆ ಒಂದು ವರ್ಷ ಜೈಲು

ಚಾಮರಾಜನಗರ: ಸರ್ಕಾರಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸುವುದರ ಜೊತೆಗೆ ನಗರಸಭೆ ಆಯುಕ್ತರಿಗೆ ಕೊಲೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಇಲ್ಲಿನ ನಗರಸಭೆಯ ಹಾಲಿ ಸದಸ್ಯ ಆರ್.ಪಿ.ನಂಜುಂಡಸ್ವಾಮಿಗೆ ಚಾಮರಾಜನಗರದ ನ್ಯಾಯಾಲಯ ಶುಕ್ರವಾರ ಒಂದು ವರ್ಷ ಸಾದಾ ಕಾರಾಗೃಹ ಶಿಕ್ಷೆ ವಿಧಿಸಿದೆ.
2010ರ ನವಂಬರ್ 10ರಂದು ಈ ಪ್ರಕರಣ ನಡೆದಿತ್ತು. ಆರ್.ಪಿ.ನಂಜುಂಡಸ್ವಾಮಿ ಅವರು ಆಗಲೂ ನಗರಸಭೆಯ ಸದಸ್ಯರಾಗಿದ್ದರು. ಈಗಲೂ ಅವರು 15ನೇ ವಾರ್ಡ್ ಸದಸ್ಯರಾಗಿದ್ದಾರೆ. ಅವರ ವಿರುದ್ಧ ಅಂದಿನ ನಗರಸಭೆ ಆಯುಕ್ತ ಎಸ್.ಪ್ರಕಾಶ್ ಅವರು ಪೊಲೀಸರಿಗೆ ದೂರು ನೀಡಿದ್ದರು.
ಘಟನೆ ವಿವರ: 2010ರ ನವೆಂಬರ್ 10ರಂದು ನಗರದ ಹೊರವಲಯದ ಯಡಬೆಟ್ಟದಲ್ಲಿ ನಗರಸಭೆಯ ವತಿಯಿಂದ ಘನ ತ್ಯಾಜ್ಯ ವಿಲೇವಾರಿ ಘಟಕದ ನಿರ್ಮಾಣಕ್ಕೆ ಭೂಮಿಪೂಜೆ ನಡೆದಿತ್ತು. ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾಗಿದ್ದ ನಂಜುಂಡಸ್ವಾಮಿ ಅವರು ಹಳೆ ಕಾಮಗಾರಿಗಳ ಲೆಕ್ಕವನ್ನು ಕೇಳುವ ನೆಪದಲ್ಲಿ ಆಯುಕ್ತರಾಗಿದ್ದ ಎಸ್.ಪ್ರಕಾಶ್ ಅವರೊಂದಿಗೆ ಜಗಳವಾಡಿದ್ದರು.
ನಂಜುಂಡಸ್ವಾಮಿ ಅವರು ಸರ್ಕಾರಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸುವುದರ ಜೊತೆಗೆ, ಆಯುಕ್ತರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದರು ಎಂದು ಆರೋಪಿಸಲಾಗಿತ್ತು. ಈ ಸಂಬಂಧ ಎಸ್.ಪ್ರಕಾಶ್ ಅವರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರನ್ನೂ ದಾಖಲಿಸಿದ್ದರು.
ನಂಜುಂಡಸ್ವಾಮಿ ವಿರುದ್ಧ ಐಪಿಸಿ 353 (ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ) 504 (ಅಪರಾಧ ಕೃತ್ಯ ಕೈಗೊಳ್ಳಲು ಪ್ರಚೋದನೆ) ಮತ್ತು 506ರ (ಕೊಲೆ ಬೆದರಿಕೆ) ಅಡಿ ಪೊಲೀಸರು ಪ್ರಕರಣ ದಾಖಲಿಸಿದ್ದರು.
ಠಾಣೆಯ ಅಂದಿನ ಸಬ್‌ಇನ್‌ಸ್ಪೆಕ್ಟರ್ ಬಿ.ಜಿ.ಕುಮಾರ್ ಅವರು ನಗರಸಭಾ ಸದಸ್ಯರ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದರು.
ಆರೋಪಗಳು ಸಾಬೀತಾಗಿರುವುದರಿಂದ ನಗರದ ಪ್ರಧಾನ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಧೀಶ ಮೊಹಮ್ಮದ್ ರೋಷನ್ ಷಾ ಅವರು ಶುಕ್ರವಾರ ನಂಜುಂಡಸ್ವಾಮಿ ಅವರಿಗೆ ಒಂದು ವರ್ಷ ಸಾದಾ ಜೈಲು ಶಿಕ್ಷೆ ಹಾಗೂ 3,000 ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಪ್ರಾಸಿಕ್ಯೂಷನ್ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಎ.ಸಿ.ಮಹೇಶ್ ಅವರು ವಾದ ಮಂಡಿಸಿದ್ದರು.







