ತೈಲ ಬೆಲೆ ಏರಿಕೆ ವಿರೋಧಿಸಿ ಲೋಕಸಭೆ ಕಲಾಪ ತ್ಯಜಿಸಿದ ಪ್ರತಿಪಕ್ಷದ ಸದಸ್ಯರು
ಹೊಸದಿಲ್ಲಿ, ಮಾ. 25: ಪಂಚ ರಾಜ್ಯಗಳ ಚುನಾವಣೆ ಬಳಿಕ ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲದ ಬೆಲೆ ಹೆಚ್ಚಿಸುವ ಅಗತ್ಯವನ್ನು ಕಾಂಗ್ರೆಸ್ ಸಂಸದರೋರ್ವರು ಪ್ರಶ್ನಿಸುವುದರೊಂದಿಗೆ ಶುಕ್ರವಾರ ಲೋಕಸಭೆಯಲ್ಲಿ ನಡೆದ ಇಂಧನ ಬೆಲೆ ಏರಿಕೆಯ ಕುರಿತ ಕಲಾಪವನ್ನು ವಿವಿಧ ಪ್ರತಿಪಕ್ಷಗಳ ಸದಸ್ಯರು ತ್ಯಜಿಸಿ ಹೊರನಡೆದರು.
ಕಾಂಗ್ರೆಸ್ ನ ಗೌರವ್ ಗೊಗೋಯಿ ಅವರು ಶೂನ್ಯ ವೇಳೆಯಲ್ಲಿ ತೈಲ ಬೆಲೆ ಏರಿಕೆಯ ಬಗ್ಗೆ ಪ್ರಶ್ನೆ ಎತ್ತಿದರು. ಹಣದುಬ್ಬರ ಹಾಗೂ ಕೊರೋನ ಸಾಂಕ್ರಾಮಿಕ ರೋಗದ ಚೇತರಿಕೆ ಬಳಿಕ ಜನರಿಗೆ ಉಸಿರಾಡುವ ಅವಕಾಶದ ಅಗತ್ಯತೆ ಇದೆ ಎಂದು ಹೇಳಿದರು. 137 ದಿನಗಳ ವಿರಾಮದ ನಂತರ ಒಂದೇ ವಾರದಲ್ಲಿ ಮೂರು ಬಾರಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಹೆಚ್ಚಾಗಲು ಕಾರಣ ಏನು ಎಂದು ಪ್ರಶ್ನಿಸಿ ಅವರು ಅಚ್ಚರಿ ವ್ಯಕ್ತಪಡಿಸಿದರು.
ಕಳೆದ ವರ್ಷ ಡಿಸೆಂಬರ್ ನಿಂದ ರಷ್ಯ ಹಾಗೂ ಉಕ್ರೇನ್ ನಡುವೆ ಸಮರ ಆರಂಭವಾಗಿದೆ. ಆದರೆ, ಈಗ ಈ ಬಿಕ್ಕಟ್ಟನ್ನು ಉಲ್ಲೇಖಿಸಿ ತೈಲ ಬೆಲೆ ಹೆಚ್ಚಿಸಲಾಗಿದೆ ಎಂದು ಪ್ರತಿಪಾದಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಭಾರತದ ಜನರು ಇನ್ನೂ ಎಷ್ಟು ಬಾರಿ ಬೆಲೆ ಏರಿಕೆ ಎದುರಿಸಬೇಕು ಎಂಬುದು ನಮಗೆ ತಿಳಿದಿಲ್ಲ. ಒಮೈಕ್ರಾನ್ ಭೀತಿಯಿಂದ ಅವರು ಈಗಷ್ಟೇ ಹೊರ ಬಂದಿದ್ದಾರೆ. ಅವರು ತಮ್ಮ ವ್ಯವಹಾರ ನಡೆಸಲು ಬೇಕಾದ ಪರಿಸರವನ್ನು ಬಯಸುತ್ತಿದ್ದಾರೆ. ಆದರೆ, ಈ ಬೆಲೆ ಏರಿಕೆ ಅವರ ವ್ಯವಹಾರದ ವೆಚ್ಚವನ್ನು ಹೆಚ್ಚಿಸಿದೆ. ಮುಖ್ಯವಾಗಿ ಅವರ ಸಾರಿಗೆ ವೆಚ್ಚವನ್ನು ಹೆಚ್ಚಿಸಿದೆ. ಇದೆಲ್ಲ ಹಣದುಬ್ಬರಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದರು.
ಬೆಲೆ ಏರಿಕೆಯ ವಿರುದ್ಧ ತಮ್ಮ ಪ್ರತಿಭಟನೆ ದಾಖಲಿಸಲು ಕಾಂಗ್ರೆಸ್, ಡಿಎಂಕೆ, ಎನ್ಸಿಪಿ, ಎಡಪಕ್ಷ ಹಾಗೂ ವಿಡುದಲೈ ಚಿರುತೈಗಳ್ ಕಚ್ಚಿ (ವಿಸಿಕೆ) ಹಾಗೂ ಐಯುಎಂಎಲ್ ಸೇರಿದಂತೆ ವಿವಿಧ ಪ್ರತಿಪಕ್ಷಗಳ ಸದಸ್ಯರು ಸಭಾ ತ್ಯಾಗ ಮಾಡಿದರು.







