ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಏರಿಕೆ

ಹೊಸದಿಲ್ಲಿ: ಕಳೆದ ಐದು ದಿನಗಳಲ್ಲಿ ನಾಲ್ಕನೇ ಬಾರಿಗೆ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿದೆ. ಇಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್ಗೆ 80 ಪೈಸೆಯಷ್ಟು ಹೆಚ್ಚಿದ್ದು, ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ.
ದೆಹಲಿಯಲ್ಲಿ ಇದೀಗ ಪೆಟ್ರೋಲ್ ಬೆಲೆ ರೂ. 98.61 ಆಗಿದೆ. ನಿನ್ನೆಯ ದರ ರೂ 97.81 ಆಗಿತ್ತು. ಅಂತೆಯೇ ಡೀಸೆಲ್ ಬೆಲೆ 89.07 ರೂಪಾಯಿಯಿಂದ 89.87 ರೂಪಾಯಿಗೆ ಜಿಗಿದಿದೆ ಎಂದು ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ಮಾರಾಟ ಸಂಸ್ಥೆಗಳ ಪ್ರಕಟಣೆ ಹೇಳಿದೆ.
ಮಾರ್ಚ್ 22ರ ಬಳಿಕ ಕಳೆದ ಐದು ದಿನಗಳ ಹಿಂದೆ ಇಂಧನ ಬೆಲೆ ಏರಿಕೆ ಪರ್ವ ಆರಂಭವಾಗಿದ್ದು, ನಾಲ್ಕು ಬಾರಿಯೂ 80 ಪೈಸೆಯಂತೆ ದರ ಏರಿಸಲಾಗಿದ.ಎ 2017ರ ಜೂನ್ನಲ್ಲಿ ದೈನಿಕ ಬೆಲೆ ಪರಿಷ್ಕರಣೆ ಆರಂಭವಾದ ಬಳಿಕ ಒಂದೇ ದಿನ ಆಗಿರುವ ಗರಿಷ್ಠ ಏರಿಕೆ ಇದಾಗಿದೆ. ನಾಲ್ಕು ಬಾರಿ ದರ ಹೆಚ್ಚಳದೊಂದಿಗೆ ಪ್ರತಿ ಲೀಟರ್ ಮಾರಾಟ ದರ 3.20 ರೂಪಾಯಿ ಹೆಚ್ಚಿದಂತಾಗಿದೆ.
ಉತ್ತರ ಪ್ರದೇಶ ಮತ್ತು ಪಂಜಾಬ್ ಸೇರಿದಂತೆ ಐದು ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ನವೆಂಬರ್ 4ಕ್ಕೆ ಬೆಲೆ ಏರಿಕೆಗೆ ಬ್ರೇಕ್ ಬಿದ್ದಿತ್ತು. ಆ ಬಳಿಕ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರಲ್ಗೆ 30 ಡಾಲರ್ನಷ್ಟು ಹೆಚ್ಚಿದೆ.







