ಉಡುಪಿ: ನಗರಸಭೆಯಿಂದ ಅನಧಿಕೃತ ಕಟ್ಟಡ ತೆರವು ಕಾರ್ಯಾಚರಣೆ
ಉಡುಪಿ : ನಗರದ ಜಾಮೀಯ ಮಸೀದಿ ರಸ್ತೆಯಲ್ಲಿರುವ ಎಸ್‌ಡಿಪಿಐ ಉಡುಪಿ ಜಿಲ್ಲಾಧ್ಯಕ್ಷ ನಝೀರ್ ಅಹ್ಮದ್ ಮಾಲಕತ್ವದ ಅನಧಿಕೃತ ಕಟ್ಟಡವನ್ನು ಉಡುಪಿ ನಗರಸಭೆಯಿಂದ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಇಂದು ತೆರವುಗೊಳಿಸಲಾಯಿತು.
ವಕ್ಫ್ ಬೋರ್ಡಿನ ಅಧೀನದಲ್ಲಿರುವ ಉಡುಪಿ ಜಾಮೀಯ ಮಸೀದಿಗೆ ಸಂಬಂಧಿಸಿದ ಈ ಜಾಗವನ್ನು ನಾಲ್ಕು ವರ್ಷಗಳ ಹಿಂದೆ ನಝೀರ್ ಅಹ್ಮದ್ ಲೀಸ್‌ಗೆ ಪಡೆದುಕೊಂಡಿದ್ದರು. ಇದರಲ್ಲಿ ಅವರು ತಾತ್ಕಾಲಿಕ ಕಟ್ಟಡವನ್ನು ನಿರ್ಮಿಸಿ ಎರಡು ಹೊಟೇಲ್‌ಗಳನ್ನು ನಡೆಸುತ್ತಿದ್ದರು.
ಇದಕ್ಕೆ ಯಾವುದೇ ಕಟ್ಟಡ ಮತ್ತು ವ್ಯಾಪಾರ ಪರವಾನಿಗೆ ಪಡೆಯದೆ ಅನಧಿಕೃತವಾಗಿ ನಿರ್ಮಿಸಿ ಅಕ್ರಮವಾಗಿ ವ್ಯವಹಾರ ನಡೆಸಲಾಗುತ್ತಿದೆ ಎಂದು ಆರೋಪಿಸಿ 2018ರಲ್ಲಿ ಈ ಕಟ್ಟಡದ ತೆರವಿಗೆ ನಗರಸಭೆಯಿಂದ ಆದೇಶ ಹೊರಡಿಸಲಾಗಿತ್ತು. ಇದರ ವಿರುದ್ಧ ನಝೀರ್ ಕೋರ್ಟಿನಲ್ಲಿ ದಾವೆ ಹೂಡಿ ತಡೆಯಾಜ್ಞೆ ತಂದಿದ್ದರು.
ಬಳಿಕ ನಗರಸಭೆಯಿಂದ ಈ ತಡೆಯಾಜ್ಞೆಯನ್ನು ತೆರವುಗೊಳಿಸಲಾಗಿತ್ತು. ಕಳೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಈ ಕಟ್ಟಡದ ಬಗ್ಗೆ ತೀವ್ರ ಚರ್ಚೆ ನಡೆದು ಕೂಡಲೇ ತೆರವುಗೊಳಿಸುವ ಬಗ್ಗೆ ನಿರ್ಣಯ ತೆಗೆದು ಕೊಳ್ಳಲಾಗಿತ್ತು. ಇಂದು ನಗರಸಭೆಯಿಂದ ತೆರವು ಕಾರ್ಯಾಚರಣೆ ನಡೆಸುವ ಕುರಿತು ಮಾಹಿತಿ ಪಡೆದ ನಝೀರ್ ಅಹ್ಮದ್, ಶುಕ್ರವಾರ ರಾತ್ರಿಯೇ ಹೊಟೇಲಿ ಗಳಲ್ಲಿನ ಸಾಮಗ್ರಿಗಳನ್ನು ತೆರವುಗೊಳಿಸಿದರು.
ಶನಿವಾರ ಬೆಳಗಿನ ಜಾವ ಬಿಗಿ ಪೊಲೀಸ್ ಭದ್ರತೆಯಲ್ಲಿ ಸ್ಥಳಕ್ಕೆ ಆಗಮಿಸಿದ ಪೌರಾಯುಕ್ತ ಡಾ.ಉದಯ ಕುಮಾರ್ ಶೆಟ್ಟಿ ನೇತೃತ್ವದ ತಂಡ ತೆರವು ಕಾರ್ಯಾ ಚರಣೆಗೆ ಮುಂದಾಯಿತು. ಆದರೆ ಮಾಲಕ ನಝೀರ್ ಅಹ್ಮದ್, ಸ್ವತಃ ನಾವೇ ತೆರವುಗೊಳಿಸುವುದಾಗಿ ಹೇಳಿದ ಹಿನ್ನೆಲೆಯಲ್ಲಿ ನಗರಸಭೆಯಿಂದ ತೆರವು ಕಾರ್ಯಾಚರಣೆ ಕೈಬಿಡಲಾಯಿತು. ಬಳಿಕ ಆರಂಭಗೊಂಡ ಕಟ್ಟಡ ತೆರವು ಕಾರ್ಯಾಚರಣೆ ಸಂಜೆಯವರೆಗೂ ಮುಂದುವರೆದಿತ್ತು.
ಈ ಹಿನ್ನೆಲೆಯಲ್ಲಿ ಈ ರಸ್ತೆಯ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಉಡುಪಿ ನಗರ ಠಾಣಾ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಸ್ಥಳದಲ್ಲಿ ಒಂದು ಡಿಎಆರ್, ಒಂದು ಕೆಎಸ್‌ಆರ್‌ಪಿ ತುಕಡಿಯನ್ನು ನಿಯೋಜಿಸಲಾಗಿತ್ತು.
ʼʼನಾನು ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಎಂಬ ಕಾರಣಕ್ಕಾಗಿ ನನ್ನ ಕಟ್ಟಡವನ್ನು ಗುರಿ ಯಾಗಿರಿಸಿ ತೆರವುಗೊಳಿಸಲಾಗುತ್ತಿದೆ. ಇದಕ್ಕಿಂತ ಹೆಚ್ಚು ಸಮಸ್ಯೆಗಳಿರುವ ಹಲವು ಕಟ್ಟಡಗಳು ನಗರದಲ್ಲಿ ಇವೆ. ನಮ್ಮ ಕಟ್ಟಡದಲ್ಲಿ ಆ ರೀತಿಯ ಯಾವುದೇ ಸಮಸ್ಯೆ ಇರಲಿಲ್ಲ. ಒಂದು ಡೋರ್ ನಂಬರ್ ಇದೆ. ಪರಾವನಿಗೆ ಅರ್ಜಿ ಸಲ್ಲಿಸಿದ್ದೇನೆ ಆದರೆ ನಗರಸಭೆಯವರು ಕೊಟ್ಟಿರಲಿಲ್ಲ. ಆ ಮಧ್ಯೆ ಈ ಕಾರ್ಯಾಚರಣೆ ನಡೆಸ ಲಾಗಿದೆ. ಹಿಜಾಬ್ ಪರ ನಿಲುವು ಹಾಗೂ ಇತ್ತೀಚೆಗೆ ನಡೆದ ಬಂದ್ ಈ ತೆರವಿಗೆ ಮುಖ್ಯ ಕಾರಣವಾಗಿದೆ. ಮುಂದೆ ಇದರ ವಿರುದ್ಧ ಕಾನೂನು ರೀತಿ ಯಲ್ಲಿ ಹೋರಾಟ ನಡೆಸಲಾಗುವುದು.
-ನಝೀರ್ ಅಹ್ಮದ್, ಕಟ್ಟಡ ಮಾಲಕ
ʼʼಇದೊಂದು ಅನಧಿಕೃತ ಕಟ್ಟಡವಾಗಿದ್ದು, ಇದಕ್ಕೆ ಯಾವುದೇ ಕಟ್ಟಡ ಪರವಾನಿಗೆ ಪಡೆದುಕೊಂಡಿರಲಿಲ್ಲ. ಇದನ್ನು ತೆರವುಗೊಳಿಸಲು 2018ರಲ್ಲಿ ಆದೇಶ ಹೊರಡಿಸಲಾಗಿತ್ತು. ಆದರೆ ಕಟ್ಟಡ ಮಾಲಕರು ಕೋರ್ಟಿನಲ್ಲಿ ದಾವೆ ಹೂಡಿ ತಡೆಯಾಜ್ಞೆ ತಂದಿದ್ದರು. ಈಗ ತಡೆಯಾಜ್ಞೆಯನ್ನು ತೆರವುಗೊಳಿಸಲಾಗಿದೆ. ಆದುದರಿಂದ ಈ ಕಾರ್ಯಾಚರಣೆ ನಡೆಸುತ್ತಿದ್ದೇವೆ. ಈ ಕಟ್ಟಡದಲ್ಲಿರುವ ಯಾವುದೇ ಅಂಗಡಿಗಳಿಗೆ ಪರವಾನಿಗೆ ಇಲ್ಲ. ನಗರಸಭೆ ವ್ಯಾಪ್ತಿಯಲ್ಲಿ ಕಟ್ಟಡ ಪರವಾನಿಗೆ ಇಲ್ಲದೆ ಕಟ್ಟಿರುವ ಅನಧಿಕೃತ ಕಟ್ಟಡ ಇದು ಒಂದೇ ಆಗಿದೆ. ಇದರಲ್ಲಿ ರಾಜಕೀಯ ಒತ್ತಡ ಇಲ್ಲ.
-ಡಾ.ಉದಯ ಕುಮಾರ್ ಶೆಟ್ಟಿ, ಪೌರಾಯುಕ್ತ