ಪಾವಗಡ ಬಸ್ ಅಪಘಾತ ಪ್ರಕರಣ: ಗಾಯಾಳು ವಿದ್ಯಾರ್ಥಿಯೋರ್ವ ಮೃತ್ಯು; ಮೃತರ ಸಂಖ್ಯೆ ಏಳಕ್ಕೆ ಏರಿಕೆ

ಪಾವಗಡ, ಮಾ.26: ಕಳೆದ ವಾರ (ಮಾ.19) ಪಾವಗಡ ತಾಲೂಕಿನ ಪಳವಳ್ಳಿ ಕಟ್ಟೆ ಎಂಬಲ್ಲಿ ಸಂಭವಿಸಿದ ಬಸ್ ಅಪಘಾತ ಪ್ರಕರಣದಲ್ಲಿ ಗಂಭೀರ ಗಾಯಗೊಂಡಿದ್ದ ಪಿಯು ಕಾಲೇಜು ವಿದ್ಯಾರ್ಥಿಯೋರ್ವ ಇಂದು ಮೃತಪಟ್ಟಿದ್ದಾನೆ. ಇದರೊಂದಿಗೆ ಈ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ.
ತಾಲೂಕಿನ ಬುಡ್ಡಾರೆಡ್ಡಿ ಹಳ್ಳಿ ಗ್ರಾಮದ ನಿವಾಸಿ ಮಹೇಂದ್ರ(18) ಮೃತ ಯುವಕ. ಇವರು ಪಾವಗಡದಲ್ಲಿ ದ್ವಿತೀಯ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಯಾಗಿದ್ದರು. ಅಪಘಾತದಲ್ಲಿ ತಲೆಗೆ ತೀವ್ರತರದ ಗಾಯಗಳಾಗಿದ್ದ ಮಹೇಂದ್ರರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಒಂದು ವಾರದ ಸಾವು-ಬದುಕಿನ ಹೋರಾಟದ ಬಳಿಕ ಅವರು ಇಂದು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಮಾ.19ರಂದು ಪಾವಗಡ ಪಳವಳ್ಳಿ ಕಟ್ಟೆ ಎಂಬಲ್ಲಿ ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದ ಪರಿಣಾಮ ಆರು ಮಂದಿ ಮೃತಪಟ್ಟಿದ್ದರೆ, ಹಲವರು ಗಂಭೀರವಾಗಿ ಗಾಯಗೊಂಡಿದ್ದರು.
Next Story





