ಲಾಕ್‌ಡೌನ್ ದುಷ್ಪರಿಣಾಮ: ಮಾನವ ಮೂಳೆಗಳನ್ನು ಮಾರುತ್ತಿರುವ ಮ್ಯಾನ್ಯುವಲ್ ಸ್ಕ್ಯಾವೆಂಜರ್‌ಗಳು
thewire.in ವರದಿ

ಸ್ಮಶಾನಗಳಿಂದ ಅಕ್ರಮವಾಗಿ ಮಾನವ ಮೂಳೆಗಳನ್ನು ಸಂಗ್ರಹಿಸಿ ಮಾರಾಟ ಮಾಡುವ ವೃತ್ತಿ ಕಳೆದ ಎರಡು ದಶಕಗಳಿಂದಲೂ ಅಸ್ತಿತ್ವದಲ್ಲಿದೆಯಾದರೂ, ಎರಡು ವರ್ಷಗಳ ಹಿಂದೆ ಕೊರೋನ ಸಾಂಕ್ರಾಮಿಕವು ಸ್ಫೋಟಿಸಿದ ಬಳಿಕ ಪ.ಬಂಗಾಳದಲ್ಲಿ ಬೋನ್ ಸ್ಕಾವೆಂಜರ್‌ಗಳ ಸಂಖ್ಯೆ ಶೇ.90ರಷ್ಟು ಏರಿಕೆಯಾಗಿದೆ. ಮಾರ್ಚ್ 2020ರಲ್ಲಿ ದೇಶಾದ್ಯಂತ ಲಾಕ್‌ಡೌನ್ ಹೇರಲ್ಪಟ್ಟಾಗ ಮ್ಯಾನ್ಯುವಲ್ ಸ್ಕಾವೆಂಜರ್‌ಗಳು ತಮ್ಮ ಕೆಲಸವನ್ನು ಕಳೆದುಕೊಂಡಿದ್ದರು ಮತ್ತು ದೀರ್ಘಕಾಲಿಕ ಹಸಿವು, ಬಡತನ ಹಾಗೂ ಪರ್ಯಾಯ ಜೀವನೋಪಾಯದ ಕೊರತೆಯಿಂದಾಗಿ ಅವರಿಗೆ ಸಾಮೂಹಿಕ ಶವಸಂಸ್ಕಾರದ ಸ್ಥಳಗಳಿಂದ ಮತ್ತು ದಫನ ಸ್ಥಳಗಳಿಂದ ಮಾನವ ಮೂಳೆಗಳನ್ನು ಸಂಗ್ರಹಿಸಿ ವ್ಯಾಪಾರಿಗಳಿಗೆ ಮಾರುವುದನ್ನು ಬಿಟ್ಟು ಅನ್ಯ ಮಾರ್ಗವಿರಲಿಲ್ಲ.
ಪ.ಬಂಗಾಳದ ಬೀರಭೂಮ್, ಸಿಲಿಗುರಿ ಮತ್ತು ಕೂಚ್‌ಬೆಹಾರ ಜಿಲ್ಲೆಗಳಲ್ಲಿಯ ಸ್ಮಶಾನಗಳಲ್ಲಿ 178 ಮ್ಯಾನ್ಯುವಲ್ ಸ್ಕ್ಯಾವೆಂಜರ್‌ಗಳು ‘ಬೋನ್ ಸ್ಕಾವೆಂಜರ್’ ಗಳಾಗಿ ವೃತ್ತಿಯನ್ನು ಕಂಡುಕೊಂಡಿದ್ದಾರೆ. ತಮ್ಮ ಮತ್ತು ತಮ್ಮ ಕುಟುಂಬಗಳ ತುತ್ತಿನ ಚೀಲಗಳನ್ನು ತುಂಬಿಸಿಕೊಳ್ಳಲು ಹಣಗಳಿಕೆಗಾಗಿ ಅವರು ಮಾನವ ಮೂಳೆಗಳನ್ನು ಅಕ್ರಮವಾಗಿ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದಾರೆ ಎನ್ನುವುದನ್ನು ವರ್ಲ್ಡ್ ಸ್ಯಾನಿಟೇಷನ್ ವರ್ಕರ್ಸ್ ಅಲಯನ್ಸ್, ಸೌಥ್ ಏಶ್ಯ ಲೇಬರ್ ನೆಟ್‌ವರ್ಕ್ ಮತ್ತು ಪ.ಬಂಗಾಳದ ಸಫಾಯಿ ಕರ್ಮಚಾರಿ ಏಕ್ತಾ ಮಂಚ್ ನಡೆಸಿರುವ ಜಂಟಿ ಅಧ್ಯಯನವು ಬಹಿರಂಗಗೊಳಿಸಿದೆ.
ಈ ಬೋನ್ ಸ್ಕ್ಯಾವೆಂಜರ್‌ಗಳು ತಾವು ಸಂಗ್ರಹಿಸಿದ ಮಾನವ ಮೂಳೆಗಳನ್ನು ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಾರೆ ಮತ್ತು ಅವರು ಅವುಗಳನ್ನು ಕ್ಯಾಲ್ಸಿಯಂ ತಯಾರಿಕೆ ಫ್ಯಾಕ್ಟರಿಗಳಿಗೆ ಹಾಗೂ ಸೌಂದರ್ಯ ಸಾಧನಗಳನ್ನು ಉತ್ಪಾದಿಸುವ ಕಿರುಘಟಕಗಳಿಗೆ ಮಾರಾಟ ಮಾಡುತ್ತಾರೆ. ಕೆಲವು ಪ್ರಕರಣಗಳಲ್ಲಿ ಬೋನ್ ಸ್ಕಾವೆಂಜರ್‌ಗಳು ಮಾನವ ಮೂಳೆಗಳ ಅಗತ್ಯವಿರುವವರಿಗೆ ತಾವೇ ನೇರವಾಗಿ ಮಾರಾಟ ಮಾಡುತ್ತಾರೆ.
ಪ.ಬಂಗಾಳವು ದೇಶದಲ್ಲಿ ಬೋನ್ ಸ್ಕ್ಯಾವೆಂಜರ್‌ಗಳಾಗಿ ದುಡಿಯುತ್ತಿರುವ ಅತ್ಯಂತ ಹೆಚ್ಚಿನ ಮ್ಯಾನ್ಯುವಲ್ ಸ್ಕ್ಯಾವೆಂಜರ್‌ಗಳನ್ನು ಹೊಂದಿರುವ ರಾಜ್ಯವಾಗಿದೆ ಎನ್ನುವುದನ್ನು ಈ ವಾರ ಬಿಡುಗಡೆಗೊಂಡ ‘ಟಾಯ್ಲೆಟ್ ಸ್ಟೋರೀಸ್ ಆಫ್ ಇಂಡಿಯಾ’ ಹೆಸರಿನ ಅಧ್ಯಯನ ವರದಿಯು ತೋರಿಸಿದೆ. ನಂತರದ ಸ್ಥಾನಗಳಲ್ಲಿ ಒಡಿಶಾ (65) ಮತ್ತು ರಾಜಸ್ಥಾನ (61)ಗಳಿವೆ. ಅಲ್ಲದೆ ಕೋಲ್ಕತಾದಲ್ಲಿ ಅಕ್ರಮ ಮೂಳೆ ಮಾರಾಟಗಾರರು ಸ್ಮಶಾನಗಳಿಂದ ಮೂಳೆಗಳನ್ನು ಸಂಗ್ರಹಿಸಲು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಸ್ವಚ್ಛತಾ ಕಾರ್ಮಿಕರನ್ನು ನೇಮಿಸಿಕೊಂಡಿದ್ದು, ಅವರಿಗೆ ಪ್ರತಿ ವಹಿವಾಟಿಗೆ 200 ರೂ.ಗಳಷ್ಟು ಅತ್ಯಲ್ಪ ಹಣವನ್ನು ನೀಡಲಾಗುತ್ತಿದೆ.
ಮೂಳೆಗಳನ್ನು ಸಂಗ್ರಹಿಸಿಯೂ ಬದುಕಬಹುದು ಎನ್ನುವುದು ಹೆಚ್ಚಿನ ಜನರಿಗೆ ಗೊತ್ತಿಲ್ಲ,ಆದರೆ ಬದುಕುಳಿಯಲೂ ಹೆಣಗಾಡುತ್ತಿರುವ ಭಾರತದ ಹೆಚ್ಚಿನ ಮ್ಯಾನ್ಯುವಲ್ ಸ್ಕ್ಯಾವೆಂಜರ್‌ಗಳಿಗೆ ಅದು ಬದುಕಲು ಸಾಕಷ್ಟು ಹಣವನ್ನು ದೊರಕಿಸುವ ಒಂದು ಉದ್ಯೋಗವಾಗಿದೆ.
ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್ ಅಥವಾ ಮಾನವರು ಮಲವನ್ನು ಹೊರುವ ವೃತ್ತಿಯನ್ನು ದೇಶದಲ್ಲಿ ನಿಷೇಧಿಸಲಾಗಿದೆ. ಆದಾಗ್ಯೂ ದೇಶದಲ್ಲಿ ಇಂದಿಗೂ ಒಣ ಶೌಚಾಲಯಗಳು ಅಸ್ತಿತ್ವದಲ್ಲಿದ್ದು, ಅವುಗಳನ್ನು ಸ್ವಚ್ಛಗೊಳಿಸಲು ಜನರ ಅಗತ್ಯವಿದೆ.
ಸ್ಮಶಾನಗಳಿಂದ ಅಕ್ರಮವಾಗಿ ಮಾನವ ಮೂಳೆಗಳನ್ನು ಸಂಗ್ರಹಿಸಿ ಮಾರಾಟ ಮಾಡುವ ವೃತ್ತಿ ಕಳೆದ ಎರಡು ದಶಕಗಳಿಂದಲೂ ಅಸ್ತಿತ್ವದಲ್ಲಿದೆಯಾದರೂ, ಎರಡು ವರ್ಷಗಳ ಹಿಂದೆ ಕೊರೋನ ಸಾಂಕ್ರಾಮಿಕವು ಸ್ಫೋಟಿಸಿದ ಬಳಿಕ ಪ.ಬಂಗಾಳದಲ್ಲಿ ಬೋನ್ ಸ್ಕ್ಯಾವೆಂಜರ್‌ಗಳ ಸಂಖ್ಯೆ ಶೇ.90ರಷ್ಟು ಏರಿಕೆಯಾಗಿದೆ. ಮಾರ್ಚ್ 2020ರಲ್ಲಿ ದೇಶಾದ್ಯಂತ ಲಾಕ್‌ಡೌನ್ ಹೇರಲ್ಪಟ್ಟಾಗ ಮ್ಯಾನ್ಯುವಲ್ ಸ್ಕ್ಯಾವೆಂಜರ್‌ಗಳು ತಮ್ಮ ಕೆಲಸವನ್ನು ಕಳೆದುಕೊಂಡಿದ್ದರು ಮತ್ತು ದೀರ್ಘಕಾಲಿಕ ಹಸಿವು, ಬಡತನ ಹಾಗೂ ಪರ್ಯಾಯ ಜೀವನೋಪಾಯದ ಕೊರತೆಯಿಂದಾಗಿ ಅವರಿಗೆ ಸಾಮೂಹಿಕ ಶವಸಂಸ್ಕಾರದ ಸ್ಥಳಗಳಿಂದ ಮತ್ತು ದಫನ ಸ್ಥಳಗಳಿಂದ ಮಾನವ ಮೂಳೆಗಳನ್ನು ಸಂಗ್ರಹಿಸಿ ವ್ಯಾಪಾರಿಗಳಿಗೆ ಮಾರುವುದನ್ನು ಬಿಟ್ಟು ಅನ್ಯ ಮಾರ್ಗವಿರಲಿಲ್ಲ.
ಲಾಕ್‌ಡೌನ್ ಹಿಂದೆಗೆದುಕೊಂಡ ಬಳಿಕ ಮತ್ತು ಜನಜೀವನವು ಸಹಜ ಸ್ಥಿತಿಗೆ ಮರಳುತ್ತಿದ್ದಾಗ ಹೆಚ್ಚಿನ ಮ್ಯಾನ್ಯುವಲ್ ಸ್ಕ್ಯಾವೆಂಜರ್‌ಗಳು ತಮ್ಮ ಮಾಮೂಲಿ ಕೆಲಸದ ಜೊತೆಗೆ ಹೆಚ್ಚುವರಿ ಆದಾಯವನ್ನು ಗಳಿಸಲು ಮೂಳೆಗಳನ್ನು ಸಂಗ್ರಹಿಸುವುದನ್ನು ಮುಂದುವರಿಸಿದ್ದರು. ಅವರು ರಾತ್ರಿಯಲ್ಲಿ ಈ ಕೆಲಸ ಮಾಡುವುದರಿಂದ ಸಂಗ್ರಹಿಸಿದ ಮಾನವ ಮೂಳೆಗಳನ್ನು ಬಚ್ಚಿಡಲು ಸ್ಥಳಗಳ ಹುಡುಕಾಟ ಮತ್ತು ಬಳಿಕ ವ್ಯಾಪಾರಿಗಳಿಗೆ ಅವುಗಳ ಮಾರಾಟ ಸುಲಭವಾಗುತ್ತದೆ.
ವರದಿಯು ತಿಳಿಸಿರುವಂತೆ ಮೂಳೆ ಸಂಗ್ರಹ ವೃತ್ತಿ ಚುರುಕು ಪಡೆದುಕೊಂಡ ಒಂದು ವರ್ಷದೊಳಗೇ ದೊಡ್ಡ ಮೂಳೆ ಕಳ್ಳಸಾಗಣೆದಾರರು ಈ ಅಕ್ರಮ ಮೂಳೆ ಮಾರಾಟ ಸರಪಳಿಯನ್ನು ‘ಭೂಗತ ಮತ್ತು ಸಣ್ಣ ಪ್ರಮಾಣದ ಉದ್ಯಮ ಮಾದರಿ’ಯನ್ನಾಗಿ ಅಭಿವೃದ್ಧಿಪಡಿಸಿದ್ದರು. ಇಲ್ಲಿ ಸೂತ್ರವು ಸರಳವಾಗಿದೆ: ಒಣ ಶೌಚಾಲಯಗಳನ್ನು ಸ್ವಚ್ಛಗೊಳಿಸಿದ್ದಕ್ಕಾಗಿ ಕೂಲಿ ಹಣಕ್ಕೆ ತಿಂಗಳು ಅಥವಾ ಅದಕ್ಕೂ ಹೆಚ್ಚು ಕಾಲ ಕಾಯುವ ಬದಲು ಈ ಸ್ಕ್ಯಾವೆಂಜರ್‌ಗಳು ತಮ್ಮಿಂದ ಸಾಧ್ಯವಿದ್ದಷ್ಟು ಮಾನವ ಮೂಳೆಗಳನ್ನು ಸಂಗ್ರಹಿಸುತ್ತಾರೆ ಮತ್ತು ಸ್ಥಳದಲ್ಲಿಯೇ ಮುಖವನ್ನು ಮುಚ್ಚಿಕೊಂಡ ವ್ಯಕ್ತಿಗಳಿಗೆ ಮಾರಾಟ ಮಾಡಿ ತಕ್ಷಣ ನಗದು ಹಣವನ್ನು ಪಡೆಯುತ್ತಾರೆ.
ಬೋನ್ ಸ್ಕ್ಯಾವೆಂಜರ್‌ಗಳು ಆಸ್ಪತ್ರೆಗಳಲ್ಲಿಯ ಖಾಯಂ ಸ್ವಚ್ಛತಾ ಸಿಬ್ಬಂದಿಯಿಂದ ಮಾನವ ಮೂಳೆಗಳನ್ನು ಸಂಗ್ರಹಿಸಿ ಮಾರಾಟ ಮಾಡುವುದು ಎರಡನೆಯ ವಿಧಾನವಾಗಿದೆ. ಇದರಿಂದಾಗಿ ಈ ಸಿಬ್ಬಂದಿಗೆ ತಮ್ಮ ಗುರುತು ಮೂಳೆ ವ್ಯಾಪಾರಿಗಳಿಗೆ ಸಿಗುವ ಭಯವಿಲ್ಲ ಮತ್ತು ಮೂಳೆ ಮಾರಾಟದಿಂದ ಲಭಿಸುವ ಹಣದಲ್ಲಿ ಒಂದು ಭಾಗ ಕಡಿಮೆ ಸಂಬಳಕ್ಕೆ ದುಡಿಯುತ್ತಿರುವ ಅವರಿಗೂ ಸಿಗುತ್ತದೆ.
ಬೋನ್ ಸ್ಕ್ಯಾವೆಂಜರ್‌ಗಳು ಮಾನವ ಅಂಗಾಂಶಗಳು ಮತ್ತು ಮೂಳೆಗಳನ್ನು ಆಸ್ಪತ್ರೆಗಳ ಸ್ವಚ್ಛತಾ ಸಿಬ್ಬಂದಿಗೆ ಮಾರಾಟ ಮಾಡುವುದು ಮೂರನೇ ವಿಧಾನವಾಗಿದೆ. ಈ ಸ್ವಚ್ಛತಾ ಕಾರ್ಮಿಕರು ಬಳಿಕ ಅವುಗಳನ್ನು ಛೇದನ ಮತ್ತು ಸಂಶೋಧನೆಗಾಗಿ ಅಗತ್ಯವಿರುವ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಮತ್ತು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಾರೆ ಎಂದು ವರದಿಯು ವಿವರಿಸಿದೆ.
ಹಲವಾರು ಮೂಳೆ ಕಳ್ಳಸಾಗಣೆದಾರರು ಈಗ ವ್ಯಾಪಾರಿಗಳನ್ನು ದೂರವಿಟ್ಟು ಸಮಾಧಿಗಳನ್ನು ಅಗೆದು ಮೂಳೆಗಳನ್ನು ಸಂಗ್ರಹಿಸುವ ಕಠಿಣ ಮತ್ತು ಅಪಾಯಕಾರಿ ಕೆಲಸಕ್ಕೆ ಬೋನ್ ಸ್ಕ್ಯಾವೆಂಜರ್‌ಗಳನ್ನೇ ನೇರವಾಗಿ ನೇಮಕ ಮಾಡಿಕೊಳ್ಳುತ್ತಿರುವುದು ಈ ವೃತ್ತಿ ಇನ್ನೂ ಮುಂದುವರಿಯಲು ಕಾರಣವಾಗಿದೆ. ಮೂಳೆಗಳ ಪ್ಯಾಕಿಂಗ್, ಸಾಗಾಟ ಇತ್ಯಾದಿ ಕೆಲಸಗಳಿಗೆ ಸ್ಥಳೀಯ ಬಡಾವಣೆಗಳ ಇತರ ಸ್ವಚ್ಛತಾ ಕಾರ್ಮಿಕರನ್ನೂ ಈ ಮೂಳೆ ಕಳ್ಳಸಾಗಣೆದಾರರು ಬಳಸಿಕೊಳ್ಳುತ್ತಿದ್ದಾರೆ.
ಹಲವಾರು ಮ್ಯಾನ್ಯುವಲ್ ಸ್ಕ್ಯಾವೆಂಜರ್‌ಗಳು ಶೌಚಾಲಯಗಳ ಸ್ವಚ್ಛತೆಯ ಜೊತೆಗೆ ಕಸಾಯಿ ಖಾನೆಗಳಲ್ಲಿ ಅಕ್ರಮವಾಗಿ ಕೆಲಸ ಮಾಡಿ ಅಳಿದುಳಿದ ಮಾಂಸ ಮತ್ತು ಪ್ರಾಣಿಗಳ ಕಳೇಬರಗಳ ಅವಶೇಷಗಳನ್ನು ಸಂಗ್ರಹಿಸಿ ಪಶು ಆಹಾರ ತಯಾರಿಕೆ ಅಥವಾ ಗೊಬ್ಬರ ತಯಾರಿಕೆ ಫ್ಯಾಕ್ಟರಿಗಳಿಗೆ ಮಾರಾಟ ಮಾಡುತ್ತಾರೆ.
ಲಾಕ್‌ಡೌನ್‌ಗೆ ಮೊದಲೂ ಪ್ರಾಣಿಗಳ ಮೂಳೆಗಳಿಗೆ ಭಾರೀ ಬೇಡಿಕೆಯಿತ್ತು ಮತ್ತು ಇದೇ ಕಾರಣದಿಂದ ಹೆಚ್ಚಿನ ಮ್ಯಾನ್ಯುವಲ್ ಸ್ಕಾವೆಂಜರ್‌ಗಳು ಮೂಳೆಗಳಿಂದ ಪ್ರಾಣಿಗಳ ಮಾಂಸವನ್ನು ಬೇರ್ಪಡಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದರು.
ಹೆಚ್ಚಿನ ಮ್ಯಾನ್ಯುವಲ್ ಸ್ಕ್ಯಾವೆಂಜರ್‌ಗಳಿಗೆ ಜೀವಕ್ಕೆ ಅಪಾಯವನ್ನುಂಟು ಮಾಡುವ ಸೆಪ್ಟಿಕ್ ಟ್ಯಾಂಕ್‌ಗಳ ಸ್ವಚ್ಛತೆ ಕೆಲಸಕ್ಕಿಂತ ಇಂತಹ ಕೆಲಸವೇ ಸುಲಭವಾಗಿದೆ. ಸ್ಕ್ಯಾವೆಂಜರ್‌ಗಳ ಜಾತಿಗಳಿಂದಾಗಿ ‘ಸ್ಕ್ಯಾವೆಂಜಿಂಗ್’ ವಿಧಿಲಿಖಿತ ಎಂಬ ಪರಿಕಲ್ಪನೆಯನ್ನು ಈ ಸಮುದಾಯಗಳ ಪುರುಷರು ಮತ್ತು ಮಹಿಳೆಯರ ಮೇಲೆ ಹೇರಲಾಗಿರುವುದರಿಂದ ಅಕ್ರಮ ಮಾನವ ಮೂಳೆಗಳ ಸಂಗ್ರಹ ವೃತ್ತಿ ಅಸ್ತಿತ್ವದಲ್ಲಿರುವುದು ಮಾತ್ರವಲ್ಲ,ಹುಲುಸಾಗಿ ಬೆಳೆಯುತ್ತಲೂ ಇದೆ.ಅದು ಮಲ,ಪ್ರಾಣಿಗಳ ಕಳೇಬರಗಳು ಅಥವಾ ಮೂಳೆಗಳ ಸಂಗ್ರಹವಾಗಿರಲಿ,ಭಾರತದಲ್ಲಿ ಈಗಲೂ ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್ ಮುಂದುವರಿದಿದೆ.
ಕೃಪೆ: thewire.in







