9/11ರ ಕಡ್ಡಾಯ ನಿಯಮ ರದ್ದಾಗಲಿ
ಒಲಿವರ್ ಡಿ’ಸೋಜಾ,ನೀರುಮಾರ್ಗ, ಮಂಗಳೂರು

ಕರ್ನಾಟಕ ಸರಕಾರವು ತನ್ನ ವರಮಾನವನ್ನು ವೃದ್ಧಿಸಿಕೊಳ್ಳಲು ಅಧಿಕ ಹಣ, ಶ್ರಮ, ಸಮಯ ಹಾಗೂ ಭ್ರಷ್ಟಾಚಾರವನ್ನು ಸಮೃದ್ಧವಾಗಿ ಪೋಷಿಸುವ ಹಾಗೂ ಸಾರ್ವಜನಿಕರಿಗೆ ಕಿರಿಕಿರಿಯನ್ನುಂಟು ಮಾಡುವ ನಿಯಮಗಳನ್ನು ಜಾರಿಗೆ ತರುವುದು ಎಷ್ಟು ಸರಿ?
ಕರ್ನಾಟಕ ಸರಕಾರ ರಾಜ್ಯದಲ್ಲಿನ ಪಂಚಾಯತ್ ವ್ಯಾಪ್ತಿಯಲ್ಲಿರುವ ಜಮೀನನ್ನು ಮಾರಾಟ ಮಾಡಲು ನಮೂನೆ 9/11 ಇರಲೇಬೇಕೆಂಬ ನಿಯಮ ಜಾರಿಗೆ ತಂದಿದೆ. ಸುಮಾರು ಹದಿನಾರುವರೆ ಲಕ್ಷ ಜನರು ತಮ್ಮ ಜಮೀನು ಮಾರಾಟ ಮಾಡಲು ನಮೂನೆ 9/11 ಸಿಗಲು ಎರಡು ವರ್ಷಕ್ಕಿಂತಲೂ ಅಧಿಕ ಸಮಯದಿಂದ ಬೀಡಾಡಿ ಜಾನುವಾರುಗಳಂತೆ ಅಲೆದು ವಿವಿಧ ಸರಕಾರಿ ಅಧಿಕಾರಿಗಳ ಕಾಲು ಹಿಡಿದು ಬೇಡಿದರೂ, ಬೇಕಾದ ಎಲ್ಲಾ ದಸ್ತಾವೇಜುಗಳನ್ನು ಹಾಜರುಪಡಿಸಿದರೂ ಲಂಚ ನೀಡಲು ಹಣವಿಲ್ಲದೆ ಕಣ್ಣೀರು ಹಾಕುತ್ತಿದ್ದಾರೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ವ್ಯಾಪ್ತಿಯ ಪಂಚಾಯತ್‌ಗಳಲ್ಲಿ ಈ ಲಂಚ ರೂ. 1ಲಕ್ಷದಷ್ಟಿದೆ. ವಿಶೇಷವೆಂದರೆ ಎಲ್ಲಾ ಚುನಾಯಿತ ಪ್ರತಿನಿಧಿಗಳಿಗೂ ಈ ವಿಷಯ ತಿಳಿದಿದ್ದು ಅವರೆಲ್ಲ ತಿಳಿಯದಂತೆ ವರ್ತಿಸುತ್ತಿದ್ದಾರೆ.
ಪಂಚಾಯತ್ ವ್ಯಾಪ್ತಿಯಲ್ಲಿನ ಅನಕ್ಷರಸ್ಥರ ಜಮೀನನ್ನು; ಮಾಲಕರಲ್ಲದವರು ಬೇರೆಯವರಿಗೆ ಮಾರಾಟ ಮಾಡುವುದನ್ನು ತಡೆಯಲು ಹಾಗೂ ಕರ್ನಾಟಕದ ವಿವಿಧ ನ್ಯಾಯಾಲಯಗಳಲ್ಲಿ ಈ ಬಗ್ಗೆ ಕನ್ನಡಿಗರು ಮುಂದೆಂದೂ ದಾವೆ ದಾಖಲು ಮಾಡ ಬೇಕಾದ ಪರಿಸ್ಥಿತಿ ಬಾರದಿರಲು ಜಮೀನಿನ ಎಲ್ಲಾ ವಿವರಗಳನ್ನು ನಮೂನೆ 9ರಲ್ಲಿ ಮಾಲಕರ ಫೋಟೊ ಸಮೇತ ನೀಡಲು ಸರಕಾರವು ಈ ನಿಯಮ ತಂದಿದೆ ಎನ್ನಲಾಗಿದೆ ಹಾಗೂ ಕಟ್ಟಡ ಜಮೀನಿನ ತೆರಿಗೆ ಬಾಕಿ ಚುಕ್ತಾ ವಿವರಗಳನ್ನು ನಮೂನೆ 11ರಲ್ಲಿ ನೀಡಲಾಗುತ್ತಿದೆ. ಇದಕ್ಕಾಗಿ ಮಾಲಕರ ವಿಳಾಸದ ಗುರುತುಪತ್ರ (ಮತದಾನ ಕಾರ್ಡ್/ರೇಷನ್ ಕಾರ್ಡ್), ಆಸ್ತಿಯ ಮಾಲಕತ್ವದ ದಾಖಲೆಗಳು, ಚಕ್ಕುಬಂದಿ ವಿವರ, ಅರ್ಜಿದಾರರ ಆಧಾರ್ ಕಾರ್ಡ್, ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ನಿವೇಶನದ ನಕ್ಷೆ, ಕ್ರಯ ಪತ್ರ, ಪಹಣಿ ಪತ್ರ, ತೆರಿಗೆ ರಸೀದಿ, ವಿದ್ಯುತ್ ಬಿಲ್ ನೀಡಬೇಕು. ದಾಖಲೆ ಕೊಟ್ಟ ಸ್ವೀಕೃತಿಯ ಪತ್ರ ಪಡೆಯಬೇಕು. ನಾಡ ಕಚೇರಿಯಲ್ಲಿ ನೋಂದಣಿ ಆಗದವರು ರೂ. 800 ಕಟ್ಟಬೇಕು. ನಮೂನೆ 9/11 ಪಡೆಯಲು ಸರಕಾರದ ಶುಲ್ಕ ಕೇವಲ ರೂ. 50 ಮಾತ್ರ. ಈ-ಸ್ವತ್ತಿನಲ್ಲಿ ಅರ್ಜಿ ಸಲ್ಲಿಸಿದರೆ 45 ದಿನಗಳೊಳಗೆ ನೀಡಬೇಕೆಂಬ ನಿಯಮವಿದೆ. ಈ-ಸ್ವತ್ತು ಆಗಿದೆಯೇ ಇಲ್ಲವೇ ಎಂದು ತಿಳಿಯಲು ಲಿಂಕ್ ಇದೆ. ಆದರೆ 45 ದಿನ ಬಿಡಿ, ಎಲ್ಲಾ ದಾಖಲೆಗಳು ಸರಿಯಾಗಿದ್ದರೂ ಮೂರು-ನಾಲ್ಕು ವರ್ಷವಾದರೂ ಕೂಡ ಪಂಚಾಯತ್ ಡೆವಲಪ್‌ಮೆಂಟ್ ಆಫೀಸರ್ ಆಸ್ತಿಯ ವಿವರಗಳನ್ನು ತಂತ್ರಾಂಶಕ್ಕೆ ಸೇರಿಸುವುದೇ ಇಲ್ಲ. ಇಲ್ಲಿ ಲಂಚ ಲಕ್ಷದ ಆಜುಬಾಜು ಇದೆ.
ನಮೂನೆ 9/11 ಸಿಗಲು ಯಾವ ದಾಖಲೆಗಳು ಬೇಕು ಹಾಗೂ ಅದನ್ನು ಪಡೆಯುವ ನ್ಯಾಯಯುತ ದಾರಿ ಯಾವುದು ಎಂದು ತಿಳಿಯದವರನ್ನು ದಿಕ್ಕುತಪ್ಪಿಸಿ; ಸರಕಾರಿ ಅಧಿಕಾರಿಗಳೇ ಏಜೆಂಟರ ಹೆಸರು ಹಾಗೂ ವಿಳಾಸ ನೀಡುತ್ತಾರೆ. ಈ ಏಜೆಂಟರು ಅಧಿಕಾರಿಗಳ ಮನೆಗೆ ಹೋಗಿ ಕಪ್ಪಸಲ್ಲಿಸಿದ ನಂತರವೇ ಕೆಲಸವು ಆರಂಭವಾಗುತ್ತದೆ. ಇಷ್ಟರಲ್ಲಿ ಇದನ್ನು ಪಡೆಯಲು ಹರಸಾಹಸ ಪಟ್ಟು, ಪ್ರತಿದಿನ ಕಚೇರಿಗೆ ಅಲೆದು ರಕ್ತದೊತ್ತಡ ಏರಿಸಿಕೊಂಡ ವ್ಯಕ್ತಿ ಸೋತು ಹೈರಾಣಾಗುತ್ತಾನೆ.
ಪರಿಹಾರವೇನು?:
1. ಜಮೀನು ಮಾರಲು ನಮೂನೆ 9/11 ಇಲ್ಲದಿದ್ದರೆ ನೋಂದಣಿ ಆಗುವುದಿಲ್ಲ ಎಂಬ ನಿಯಮವನ್ನು ಈ ಕೂಡಲೇ ರದ್ದುಪಡಿಸಬೇಕು.
2. ಪ್ರತಿ ಜಮೀನಿನ ನೋಂದಣಿ ಆದಾಗಲೇ ಮಾಲಕನ ಹಾಗೂ ಮಾರಾಟ ಮಾಡಿದ ವ್ಯಕ್ತಿಗಳ ಆಧಾರ್ ಸಂಖ್ಯೆಯನ್ನು ನೋಂದಣಿ ದಾಸ್ತಾವೇಜಲ್ಲಿ ಕಡ್ಡಾಯವಾಗಿ ನಮೂದಿಸಬೇಕು.
3. ಮಾರಾಟ ಮಾಡಿದ ಹಾಗೂ ಕ್ರಯಕ್ಕೆ ತೆಗೆದುಕೊಂಡವರ ಫೋಟೊ ಹೇಗೂ ನೋಂದಣಿ ದಸ್ತಾವೇಜಲ್ಲಿ ಇರುತ್ತದೆ. ಇನ್ನು ಮುಂದೆ ಬೆರಳಚ್ಚು ಕೂಡ ತೆಗೆದುಕೊಳ್ಳಬಹುದು. ಆಗ ನಕಲಿ ದಸ್ತಾವೇಜು ತಯಾರಿಸಿ ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ. ಯಾಕೆಂದರೆ ಬೆರಳಚ್ಚು ತಾಳೆಯಾಗುವುದಿಲ್ಲ. ನಕಲಿ ದಸ್ತಾವೇಜು ದಾವೆಗಳು ಎಂದೂ ನ್ಯಾಯಾಲಯದಲ್ಲಿ ಬರುವುದಿಲ್ಲ.
4. ಏಕಗವಾಕ್ಷಿ ಯೋಜನೆ ಜಾರಿಗೆ: ನಮ್ಮಲ್ಲಿ ದಸ್ತಾವೇಜು ಮಾತ್ರ ಇದ್ದು ನಕ್ಷೆ ಹಾಗೂ ಪಹಣಿಪತ್ರ ಇಲ್ಲವೆಂದರೆ ಆಗ ಆ ನಕ್ಷೆಗಳಿಗೆ ಪ್ರಸ್ತುತ ದರ ರೂ. 300 ಹಾಗೂ ಪಹಣಿ ಪತ್ರದ ರೂ. 15ನ್ನು ದಾಖಲೆಯನ್ನು ಸಲ್ಲಿಸುವಾಗಲೇ ಸರಕಾರವು ನಮ್ಮಿಂದ ತೆಗೆದುಕೊಳ್ಳಲಿ. ಆನಂತರದ ಮೂವತ್ತು ದಿನಗಳೊಳಗೆ ಅರ್ಜಿದಾರನಿಗೆ ನಮೂನೆ 9/11 ಅದೇ ಏಕಗವಾಕ್ಷಿಯಿಂದ ತೆಗೆದು ಪಡೆದುಕೊಳ್ಳಲು ಅವರ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ ಕಳುಹಿಸಲಿ ಇದರಿಂದಾಗಿ ಮೂಡಾ ಕಚೇರಿ, ತಹಶೀಲ್ದಾರ ಕಚೇರಿ, ನಾಡ ಕಚೇರಿಗೆ ನೂರಾರು ಬಾರಿ ಅಲೆದಾಡುವ ಹಾಗೂ ಲಂಚ ನೀಡುವ ಪ್ರಮೇಯವಿರಲಾರದು.







